ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಮಗು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ರಾಮದುರ್ಗ ತಾಲ್ಲೂಕಿನ ಓರ್ವ ಮಹಿಳೆ ಮಗುವನ್ನು ಕದ್ದಿದ್ದರು. ಆಕೆಗೆ ಸಹಾಯ ಮಾಡಿದ ಮೂವರು ಸೇರಿ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಮಗುವನ್ನು ರಕ್ಷಿಸಲಾಗಿದೆ. ಮಹಿಳೆ ನಕಲಿ ತಾಯಿ ಕಾರ್ಡ್ ಮಾಡಿಸಿಕೊಂಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಬಾಗಲಕೋಟೆ, ಜೂನ್ 14: ಇಂದು ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಓರ್ವ ಮಹಿಳೆ ಒಂದು ದಿನದ ಹೆಣ್ಣು ಮಗುವೊಂದನ್ನು (child) ಕಳ್ಳತನ ಮಾಡಿದ್ದ ಘಟನೆ ನಡೆದಿದೆ. ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಖಾನಪೇಟೆ ನಿವಾಸಿ ಸಾಕ್ಷಿ ಯಾದವಾಡ (24) ಮಗು ಕದ್ದ ಮಹಿಳೆ. ಸದ್ಯ ಮಗುವಿನ ರಕ್ಷಣೆ ಮಾಡಲಾಗಿದೆ. 2024 ರಿಂದಲೇ ಮಗು ಕದಿಯಲು ಪ್ಲ್ಯಾನ್ ಮಾಡಿದ್ದು, ಸಾಕ್ಷಿಗೆ ಆಕೆಯ ತಾಯಿ, ಸಹೋದರಿಯರು ಸೇರಿ ಮೂವರು ಸಾಥ್ ನೀಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿದಂತೆ ನಾಲ್ವರನ್ನು ಬಾಗಲಕೋಟೆ ನವನಗರ ಪೊಲೀಸರು ಬಂಧಿಸಿದ್ದಾರೆ.
ನಡೆದದ್ದೇನು?
ಸಾಕ್ಷಿ ಯಾದವಾಡ, ಶುಕ್ರವಾರ ಸಂಜೆ ಜಿಲ್ಲಾಸ್ಪತ್ರೆಗೆ ಬಂದು ಅನುಮತಿ ಪಡೆಯದೇ ಹೆರಿಗೆ ವಾರ್ಡ್ನಲ್ಲಿ ಸೇರಿಕೊಂಡಿದ್ದರು. ಅಕ್ಕಪಕ್ಕದವರಿಗೆ ನನಗೂ ಮಗು ಆಗಿದೆ ಎಂದು ಹೇಳಿದ್ದಾರೆ. ಇಂದು ಬೆಳಿಗ್ಗೆ 4.30 ಗಂಟೆಗೆ ನರ್ಸ್ ಅಂತ ಹೇಳಿ ಕಫ ತೆಗೆಸುವುದಾಗಿ ಬೇರೆಯವರ ಮಗುವನ್ನು ತೆಗೆದುಕೊಂಡು ಹೋಗಿ ತಮ್ಮ ಬಳಿ ಮಲಗಿಸಿಕೊಂಡಿದ್ದಾರೆ.
ಇನ್ನು ಸಾಕ್ಷಿ ಯಾದವಾಡ ಜಿಲ್ಲೆಯ ಕಡಕೋಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಕಲಿ ತಾಯಿ ಕಾರ್ಡ್ ಮಾಡಿಸಿದ್ದಾರೆ. ಆ ಮೂಲಕ ತನ್ನ ಅನುಕೂಲಕ್ಕೆ ತಕ್ಕಂತೆ ದಿನಾಂಕ ತಿದ್ದುಪಡಿ ಮಾಡುತ್ತಿದ್ದರು. ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ 2024ರಲ್ಲೇ ಸಾಕ್ಷಿ ಒಟ್ಟು ಮೂರು ಬಾರಿ ಒಪಿಡಿ ಮಾಡಿಸಿ ಚಿಕಿತ್ಸೆ ಪಡೆಯದೆ ಹೋಗಿದ್ದರು. ಒಂದು ಬಾರಿ ಗರ್ಭದ ಬಗ್ಗೆ ಸ್ಕ್ಯಾನಿಂಗ್ ಮಾಡಿಸಿದ್ದು, ಅದರಲ್ಲಿ ನೆಗೆಟಿವ್ ಬಂದಿತ್ತು.
ಮಹಿಳೆಗೆ ಹೆರಿಗೆಯೇ ಆಗಿಲ್ಲ
ಜಿಲ್ಲಾಸ್ಪತ್ರೆಯ ಪಕ್ಕದ ವಾರ್ಡ್‌ನಲ್ಲೇ ಇದ್ದ ಸಾಕ್ಷಿ ಯಾದವಾಡ ಬಳಿ ಮಗು ಪತ್ತೆ ಆಗಿದೆ. ಸಂಶಯ ಬಂದು ಮಹಿಳೆಗೆ ವೈದ್ಯರಿಂದ ಪರೀಕ್ಷೆ ಮಾಡಲಾಗಿದ್ದು, ಈ ವೇಳೆ ಮಹಿಳೆಗೆ ಹೆರಿಗೆ ಆಗಿಲ್ಲ ಎಂಬುದು ದೃಢವಾಗಿದೆ. ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಮಗು ಹೇಗೆ ನಿಮ್ಮ ಬಳಿ ಬಂತು ಎಂದು ವಾರ್ಡ್‌ನಲ್ಲೇ DySP ಮಹಾಂತೇಶ್ ಜಿದ್ದಿ ಮತ್ತು ಸಿಪಿಐ ಬಿರಾದಾರರಿಂದ ಮಹಿಳೆ ವಿಚಾರಣೆ ಮಾಡಲಾಗಿದೆ. ಈ ವೇಳೆ ಮಗು ನನ್ನದೇ ಎಂದು ಮಹಿಳೆ ವಾದ ಮಾಡಿದ್ದಾರೆ.
ಘಟನೆ ಬಗ್ಗೆ ಮಾತನಾಡಿರುವ ಜಿಲ್ಲಾಸ್ಪತ್ರೆ ಸರ್ಜನ್ ಮಹೇಶ್ ಕೋಣಿ, ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುತ್ತೇವೆ. ಆಸ್ಪತ್ರೆಯಲ್ಲಿ ಸಂಬಂಧಪಟ್ಟ ವಾರ್ಡ್ನಲ್ಲಿ ನಿರ್ಲಕ್ಷ್ಯ ಬಗ್ಗೆಯೂ ವಿಚಾರಣೆ ಮಾಡುವುದಾಗಿ ಹೇಳಿದ್ದಾರೆ.
ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಹೇಳಿದ್ದಿಷ್ಟು
ಜಿಲ್ಲಾಸ್ಪತ್ರೆಗೆ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದು, ನರ್ಸ್ ಅಂತ ಹೇಳಿ ಕಫ ತೆಗೆಸುವುದಾಗಿ ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಜಿಲ್ಲಾಸ್ಪತ್ರೆ ಕ್ಯಾಮೆರಾ ಹಾಗೂ ನಗರದಲ್ಲಿ ನಾವು ಅಳವಡಿಸಿರುವ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸುತ್ತೇವೆ ಎಂದಿದ್ದರು.