
ಅಹ್ಮದಾಬಾದ್: ಇಂದು ಮಧ್ಯಾಹ್ನ 1.39ಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ 5 ನಿಮಿಷಕ್ಕೆ ಪತನಗೊಂಡಿದೆ. ವಿಮಾನ ಪತನವಾಗ್ತಿದ್ದಂತೆ ದೊಡ್ಡ ಪ್ರಮಾಣದ ಸ್ಫೋಟ ಸಂಭವಿಸಿದೆ. ಅಹ್ಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ವಿಮಾನದಲ್ಲಿದ್ದ ಒಟ್ಟು 133 ಮಂದಿ ಜೀವ ಕಳೆದುಕೊಂಡಿರುವ ಬಗ್ಗೆ ಮಾಹಿತಿ ಇದೆ. ಪ್ರಾಣ ಹಾನಿಯ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

15 ವರ್ಷದ ಹಿಂದೆ ಇದೇ ತರಹ ದೊಡ್ಡ ದುರಂತವೊಂದು ಸಂಭವಿಸಿತ್ತು. ಮಂಗಳೂರು ಬಜ್ಜೆ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ವಿಮಾನ ಪತನಗೊಂಡಿತ್ತು. ಆ ದುರಂತದಲ್ಲಿ ಪೈಲೆಟ್, ಸಿಬ್ಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. ಈ ಪೈಕಿ 19 ಮಕ್ಕಳು ಹಾಗೂ 6 ಮಂದಿ ಶಿಶುಗಳು, 6 ವಿಮಾನ ಸಿಬ್ಬಂದಿ ಸಹಿತ 166 ಮಂದಿ ಪ್ರಯಾಣಿಸುತ್ತಿದ್ದರು. ಆ ಅಪಘಾತದಲ್ಲಿ 8 ಮಂದಿ ಮಾತ್ರ ಬದುಕಿ ಬಂದಿದ್ದರು.
ಏನಿದು ಮಂಗಳೂರು ವಿಮಾನ ದುರಂತ..
2010ರ ಮೇ 22ರಂದು ಬೆಳಗ್ಗೆ 6.20ಕ್ಕೆ ದುಬೈನಿಂದ ಮಂಗಳೂರಿಗೆ ಬಂದ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಎಲ್ಲಾ ಸುರಕ್ಷಾ ಸಂಕೇತಗಳನ್ನು ಆಧರಿಸಿಯೇ ಇಳಿದಿತ್ತು. ಆದರೆ ರನ್‌ವೇಯಲ್ಲಿ ನಿಲ್ಲಬೇಕಾದ ವಿಮಾನವು ನೇರವಾಗಿ ಮುಂದಕ್ಕೆ ಚಲಿಸುತ್ತಲೇ ಸೂಚನಾ ಗೋಪುರದ ಕಂಬಗಳಿಗೆ ಡಿಕ್ಕಿ ಹೊಡೆದು ಆಳ ಪ್ರದೇಶಕ್ಕೆ ಉರುಳಿ ಬಿದಿತ್ತು. ಈ ಘಟನೆಗೆ ಪೈಲೆಟ್‌ನ ನಿರ್ಲಕ್ಷ್ಯ, ಸಹ ಪೈಲಟ್‌ನ ಸಲಹೆ ಪಾಲಿಸದೆ ಇದ್ದದ್ದೇ ಕಾರಣ ಎಂದು ತನಿಖೆಯಲ್ಲಿ ಗೊತ್ತಾಗಿದೆ.

ಈ ಘಟನೆಯಲ್ಲಿ ಹಲವರ ಮೃತದೇಹದ ಗುರುತು ಪತ್ತೆಯಾಗದೆ ಉಳಿದಿದ್ದವು. ಅದೇ ಜಾಗದಲ್ಲಿ ಸಂತ್ರಸ್ತರ ನೆನಪಿನ ಪಾರ್ಕ್ ನಿರ್ಮಿಸಲಾಗಿದೆ. ವಿಮಾನ ದುರಂತ ಸಂಭವಿಸಿ 15 ವರ್ಷ ತುಂಬಿದೆ.