Hayath Tv | | Published : Jun 04 2025, 01:29 PM
ಉಡುಪಿ ಜಿಲ್ಲೆಯಲ್ಲಿ ಕೋಮು ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಇಬ್ಬರನ್ನು ಬಂಧಿಸಲಾಗಿದೆ. ಪೊಲೀಸ್ ಇಲಾಖೆ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಮತ್ತು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಲು ತಂಡವನ್ನು ರಚಿಸಿದೆ.
ಉಡುಪಿ (ಜೂ.4): ಉಡುಪಿ ಜಿಲ್ಲೆಯಲ್ಲಿ ಕಳೆದ 3 ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಪ್ರಸಾರ ಮಾಡಿರುವ ಇಬ್ಬರ ಮೇಲೆ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ. ಇಂತಹ ಪ್ರಕರಣಗಳನ್ನು ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿದೆ. ಆದ್ದರಿಂದ ಯಾರೂ ಇಂತಹ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಬಾರದು ಎಂದು ಉಡುಪಿಯ ನೂತನ ಎಸ್ಪಿ ಹರಿರಾಮ್ ಶಂಕರ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನಾಕಾರಿ ಪೋಸ್ಟ್‌ಗಳು ಹರಿದಾಡುತ್ತಿವೆ. ಇಂತಹ ಪೋಸ್ಟ್‌ಗಳನ್ನು ಪೊಲೀಸ್ ಇಲಾಖೆ ಬಹಳ ಗಂಭೀರ ತೆಗೆದುಕೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನಾಕಾರಿ ಸಂದೇಶಗಳನ್ನು ಮೇಲೆ ಕಣ್ಣಿಡುವುದಕ್ಕೆ ತಂಡ ರಚಿಸಲಾಗಿದೆ. ಜೊತೆಗೆ ರಾಜ್ಯ ಮಟ್ಟದಲ್ಲಿಯೂ ಸಾಮಾಜಿಕ ಜಾಲತಾಣಗಳ ಪರಿಶೀಲನೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ.
ಇಂತಹ ಪ್ರಕರಣಗಳಲ್ಲಿ ಸಿಕ್ಕಿಬಿದ್ದು ಬಂಧನಕ್ಕೊಳಗಾದವರಿಗೆ ಸರ್ಕಾರಿಯಾಗಲಿ, ಖಾಸಗಿಯಾಗಿ ಉದ್ಯೋಗ, ಅಥವಾ ಸೈನ್ಯ ಅಥವಾ ಪೊಲೀಸ್ ಇಲಾಖೆಯಲ್ಲಿಯೂ ಅವಕಾಶ ಸಿಗುವುದಿಲ್ಲ, ಆದ್ದರಿಂದ ಫೇಸ್‌ಬುಕ್, ವಾಟ್ಸಾಪ್ ಅಥವಾ ಇನ್ಸ್ಟಾಗ್ರಾಮ್‌ಗಳಲ್ಲಿ ಇಂತಹ ಪೋಸ್ಟ್‌ಗಳನ್ನು ಹಾಕುವ, ಶೇರ್ ಮಾಡುವ ಅಥವಾ ಫಾರ್ವರ್ಡ್ ಮಾಡಬಾರದು ಎಂದವರು ಕಿವಿಮಾತು ಹೇಳಿದ್ದಾರೆ