
ಭಾರತದ ದೇವಮೂಲೆ ಈಶಾನ್ಯ ರಾಜ್ಯಗಳಿಗೆ ಆವರಿಸಿದ ವರುಣ ದಿಗ್ಬಂಧನ ಇನ್ನೂ ಸಡಿಲವಾಗಿಲ್ಲ. ಆ ಭಾಗದಲ್ಲಿ ದಿಢೀರ್ ಪ್ರವಾಹದಿಂದ ದಿನೇ ದಿನೇ ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೇವಲ ಎರಡನೇ ದಿನಕ್ಕೆ 34 ಮಂದಿಯ ಜೀವ ತೆಗೆದ ಮಳೆ. ಈಗ ಸಾವಿನ ಸಂಖ್ಯೆಯನ್ನ 40ಕ್ಕೆ ಏರಿಸಿದೆ.
ಅರುಣಾಚಲ ಪ್ರದೇಶ್, ಅಸ್ಸಾಂ, ತ್ರಿಪುರ, ಸಿಕ್ಕಿಂ, ಮೇಘಾಲಯ, ಮಿಜೋರಾಮ್ ಈ ಐದು ಈಶಾನ್ಯ ರಾಜ್ಯಗಳಲ್ಲಿ ಮಳೆಯ ಅವಾಂತರಗಳು ಹೆಚ್ಚಾಗಿವೆ. ಈ ರಾಜ್ಯಗಳಲ್ಲಿ 5.5 ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಹ ಪೀಡಿತರಾಗಿದ್ದಾರೆ. ಕೇವಲ ಅಸ್ಸಾಂನಲ್ಲೇ 1.44 ಲಕ್ಷಕ್ಕೂ ಹೆಚ್ಚು ಜನ ಪ್ರವಾಹದ ಬಾಹುಬಂಧನದಲ್ಲಿದ್ದಾರೆ. ಇಲ್ಲಿ 1,400ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಇಲ್ಲಿನ 22 ಜಿಲ್ಲೆಗಳಲ್ಲಿ 5 ಲಕ್ಷ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಸ್ಸಾಂ ಜಿಲ್ಲೆಯಲ್ಲೇ ಮರಣ ಮಳೆಗೆ 9ಕ್ಕೂ ಹೆಚ್ಚು ಸಾವುಗಳು ಆಗಿವೆ ಎಂದು ಮೂಲಗಳು ತಿಳಿಸಿವೆ.

ಇನ್ನೂ ಸಿಕ್ಕಿಂನಲ್ಲಿ ಪ್ರವಾಹಕ್ಕೆ ಸಿಲುಕಿಕೊಂಡಿದ್ದ 34 ಮಂದಿಯನ್ನ ಭಾರತೀಯ ಸೇನೆ ಮತ್ತು ವಾಯುಪಡೆಯಿಂದ ಎರಡು MI-17 ವಿ5 ಹೆಲಿಕಾಪ್ಟರ್ ಬಳಸಿ ಏರ್ ಲಿಫ್ಟ್ ಮಾಡಲಾಗಿದೆ. ಹೀಗೆ ಸಿಕ್ಕಿಂ ರಾಜ್ಯಾದಾದ್ಯಂತ ಸಂಕಷ್ಟಕ್ಕೆ ಸಿಲುಕಿದ್ದ 1,600 ಮಂದಿಯನ್ನ ರಕ್ಷಣೆ ಮಾಡಲಾಗಿದೆ.

ಭಾರೀ ಮಳೆಯಿಂದ ಸಿಕ್ಕಿಂನ ಲಾಂಚೆನ್ ಜಿಲ್ಲೆಯಲ್ಲಿನ ಆರ್ಮಿ ಕ್ಯಾಂಪ್ ಮೇಲೆ ಭೂಕುಸಿತವಾಗಿತ್ತು. ಇದೇ ಭೂಕುಸಿತದಿಂದ 3 ಮಂದಿ ಮಿಲಿಟರಿ ಯೋಧರ ಸಾವಾಗಿದ್ದು, ಆರು ಮಂದಿ ಭಾರತೀಯ ಸೈನಿಕರ ನಾಪತ್ತೆಯಾಗಿದ್ದಾರೆ. ಕೂಡಲೇ ಎಚ್ಚೆತ್ತ ಭಾರತೀಯ ಸೇನೆ, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿದೆ. ಪ್ರವಾಸಿಗರ ತಾಣವಾಗಿರುವ ಸಿಕ್ಕಿಂನಲ್ಲಿ, ಇಲ್ಲಿವರೆಗೂ ಸಾವಿರಾರು ಮಂದಿ ಪ್ರವಾಸಿಗರು ಸಿಲುಕಿಕೊಂಡಿರೋದಾಗಿ ವರದಿಯಾಗಿದೆ.

ತ್ರಿಪುರ ರಾಜ್ಯದಲ್ಲಿ 10 ಸಾವಿರ ಮಂದಿ ಇನ್ನೂ ರಿಲೀಫ್ ಕ್ಯಾಂಪ್ ಗಳಲ್ಲಿ ವಾಸ ಹೂಡಿದ್ದಾರೆ. ಮೇಘಾಲಯ ಸಿಎಂ ಭೇಟಿಯಾಗಿ ಪ್ರವಾಹ ಪರಿಸ್ಥಿತಿ ಬಗ್ಗೆ ಅಸ್ಸಾಂ ಸಿಎಂ ಹೀಮಂತ್ ಬಿಸ್ವಾ ಶರ್ಮಾ ಚರ್ಚೆ ನಡೆಸಿ ಮತ್ತಷ್ಟು ರಕ್ಷಣಾ ವ್ಯವಸ್ಥೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.