ಮಂಗಳೂರು, ಜೂ. 1: ಇತ್ತೀಚೆಗೆ ಕೊಳತ್ತಮಜಲ್ ನಲ್ಲಿ ವ್ಯವಸ್ಥಿತವಾಗಿ ಸಂಘ ಪರಿವಾರದ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಅಬ್ದುಲ್ ರಹಿಮಾನ್ ಕೊಲೆಯನ್ನು ಖಂಡಿಸಿ ಮತ್ತು ಕುಡುಪು ಎಂಬಲ್ಲಿ ಗುಂಪು ಹಿಂಸೆಗೆ ಬಲಿಯಾದ ಅಶ್ರಫ್ ಎಂಬವರ ಹತ್ಯೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಬಳಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಅಬ್ದುಲ್ ರಹಿಮಾನ್ ಕೊಲೆಯ ಸಂದರ್ಭದಲ್ಲಿ ಸಂಘಪರಿವಾರದಿಂದ ಕೊಲೆಯತ್ನಕ್ಕೊಳಗಾದ ಕಲಂದರ್ ಶಾಫಿಗೆ ನ್ಯಾಯ ದೊರಕಿಸುವಂತೆ ಹಾಗೂ ಜಿಲ್ಲೆಯ ಸೌಹಾರ್ದಕ್ಕೆ ಮಾರಕವಾದ ಇಂತಹ ದುರ್ಘಟನೆಗಳಿಗೆ ಕಡಿವಾಣ ಹಾಕದೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವ ರಾಜ್ಯ ಗೃಹ ಇಲಾಖೆಯ ವೈಫಲ್ಯದ ವಿರುದ್ಧವೂ ಈ ಪ್ರತಿಭಟನೆಯಲ್ಲಿ ಸಹಸ್ರಾರು ಜನರು ಸೇರಿ ಆಕ್ರೋಶ ಹೊರಹಾಕಿದರು.
ಈ ಪ್ರತಿಭಟನೆಯಲ್ಲಿ ಇತ್ತೀಚೆಗೆ ಕುಡುಪುವಿನಲ್ಲಿ ಗುಂಪು ಹತ್ಯೆಗೊಳಗಾದ ಅಶ್ರಫ್ ವಯನಾಡು, ಕೊಳತ್ತಮಜಲಿನಲ್ಲಿ ಹತ್ಯೆಗೊಳಗಾದ ಅಬ್ದುಲ್ ರಹಿಮಾನ್ ಹಾಗೂ ಗಾಯಗೊಂಡ ಕಲಂದರ್ ಶಾಫಿ ಕುಟುಂಬಸ್ಥರು ಭಾಗಿಯಾಗಿದ್ದರು.
ವೇದಿಕೆಯಲ್ಲಿ ಶಹೀದ್ ಅಬ್ದುಲ್ ರಹಿಮಾನ್ ಕೊಳತ್ತಮಜಲು ಸಹೋದರ ಹನೀಫ್ ಮತ್ತು ಗಾಯಗೊಂಡ ಶಾಫಿಯ ತಂದೆ ಅಬ್ದುಲ್ ಖಾದರ್ ಹಾಗೂ ಶಹೀದ್ ವಯನಾಡು ಅಶ್ರಫ್ ರ ಸಹೋದರ ಅಬ್ದುಲ್ ಜಬ್ಬಾರ್ ಉಪಸ್ಥಿತರಿದ್ದರು.*

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಎಸ್ ರವರು ಮಾತನಾಡಿ ‘ಜಿಲ್ಲೆಯು ಬಹಳ ಶಾಂತಿ ಸೌಹಾರ್ದತೆಗೆ ಹೆಸರಾಗಿತ್ತು. ಶ್ರೀ ಕೃಷ್ಣ ಮಠದಲ್ಲಿ ದೀಪ ಬೆಳಗಿಸಲು ಎಣ್ಣೆ ದಾನ ಮಾಡಿರುವುದು ಇಲ್ಲಿನ ಮುಸ್ಲಿಂ ಆಗಿದ್ದರು. ಆದರೆ ಸಂಘಪರಿವಾರದವರು ಇಲ್ಲಿನ ಶಾಂತಿ ಸುವ್ಯವಸ್ಥೆ ಹಾಳುಗೆಡವಿದರು. ಮುಸ್ಲಿಮರ ವ್ಯಾಪಾರ ಬಹಿಷ್ಕಾರ, ಪ್ರತಿಕಾರದ ಭಾಷಣಗಳು ಸಮಾಜವನ್ನು ಒಡೆದಿವೆ. ತನ್ನೊಂದಿಗೆ ಇದ್ದ ನೆರೆಮನೆಯ ದೀಪಕ್ ಎಂಬಾತ ಸಂಘದ ಶಾಖೆಯಿಂದ ಕಲಿತ ಹಿಂದುತ್ವದ ವಿಷದಿಂದ ತನ್ನ ತಂದೆಗೆ ರಕ್ತದಾನ ಮಾಡಿದ ಅಬ್ದುಲ್ ರಹಿಮಾನ್ ಎಂಬವರನ್ನು ಕೊಂದಿದ್ದಾನೆ. ಸಂಘಪರಿವಾರದೊಂದಿಗೆ ಯಾವುದೇ ವ್ಯವಹಾರ ಮಾಡಬಾರದು’ ಎಂದು ಕರೆ ನೀಡಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಮಾತನಾಡಿ ‘ಜಿಲ್ಲೆಯಲ್ಲಿ ನಾವು ಕೊಂದಿದ್ದೇವೆ, ಬೀದಿಯಲ್ಲಿ ಕೊಚ್ಚಿ ಹಾಕಿದ್ದೇವೆ ಎಂದು ಭಾಷಣ ಬಿಗಿದು ಅಬ್ದುಲ್ ರಹಿಮಾನ್ ಹತ್ಯೆಗೆ ಸ್ಕೆಚ್ ಹಾಕಿಕೊಟ್ಟ ಭರತ್ ಕುಮ್ಡೇಲ್ ಇವಾಗ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಮಾನ್ಯ ಪೋಲಿಸ್ ವರಿಷ್ಠಾಧಿಕಾರಿಯವರೇ ನಿಮ್ಮ ಕಾರ್ಯ ದಕ್ಷತೆ ಈ ಹತ್ಯೆಯ ಸೂತ್ರಧಾರಿಗಳ ಬಂಧನದಲ್ಲಿ ತೋರಿಸಿ. ನಮಗೆ ಇಲ್ಲಿ ಸಂವಿಧಾನವಿದೆ ನಾವು ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ಹೋರಾಟದ ಪ್ರತೀಕಾರ ತೀರಿಸುತ್ತೇವೆ’ ಎಂದು ಗುಡುಗಿದರು.

ಇನ್ನೋರ್ವ ಅತಿಥಿಯಾದ ಬಂಟ್ವಾಳ ಪುರಸಭಾ ಉಪಾಧ್ಯಕ್ಷರೂ, ಪಕ್ಷದ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರೂ ಆದ ಮೂನಿಶ್ ಆಲಿ ಮಾತನಾಡಿ ‘ ಜಿಲ್ಲೆಯಲ್ಲಿ ನಡೆದ ಹತ್ಯೆಗಳ ಹಂತಕರನ್ನು ಬಂಧಿಸುವಲ್ಲಿ ಪೋಲಿಸರು ತಾರತಮ್ಯ ನೀತಿಯನ್ನು ಅನುಸರಿಸುತ್ತಿದ್ದಾರೆ. ಆರೋಪಿಗಳು ಮುಸ್ಲಿಮರಾದರೆ ಪೋಲಿಸರಲ್ಲಿರುವ ತನಿಖಾ ಕಾರ್ಯದಕ್ಷತೆ ಹಿಂದುತ್ವವಾದಿ ಬಂಧನದಲ್ಲಿ ಇಲ್ಲ’ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ಜಲೀಲ್ ಕೃಷ್ಣಾಪುರ, ಉಪಾಧ್ಯಕ್ಷರಾದ ಅಶ್ರಫ್ ಅಡ್ಡೂರು, ಮಂಗಳೂರು ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು
ಮತ್ತಿತರರು ಉಪಸ್ಥಿತರಿದ್ದರು
ಈ ಬೃಹತ್ ಪ್ರತಿಭಟನೆಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು, ಸಾರ್ವಜನಿಕ ಬಂಧುಗಳು ಸೇರಿ ಅನೇಕರು ಭಾಗಿಯಾಗಿದ್ದರು. ಎಸ್ ಡಿ ಪಿ ಐ ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಸ್ವಾಗತಿಸಿ, ಮಂಗಳೂರು ಗ್ರಾಮಾಂತರ ಕಾರ್ಯದರ್ಶಿ ಅಶ್ರಫ್ ತಲಪಾಡಿ ನಿರೂಪಿಸಿ, ಧನ್ಯವಾದಗೈದರು.
