ಮಂಗಳೂರಿನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ಮಧ್ಯೆ 15 ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇತ್ತ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ರಾತ್ರೋರಾತ್ರಿ ಸಂಘಟನೆ ಮುಖಂಡರ ಮನೆಗಳಿಗೆ ಭೇಟಿ ನೀಡಿದ್ದಾರೆ. ಇದಕ್ಕೆ ಮುಖಂಡರ ಆಕ್ಷೇಪ ವ್ಯಕ್ತವಾಗಿದೆ.
ಮಂಗಳೂರು, ಜೂನ್ 02: ಸಾಲು ಸಾಲು ಹತ್ಯೆಗಳಿಂದ ಕಡಲತಡಿ ಮಂಗಳೂರು ಕಾದ ಕುಲುಮೆಯಂತಾಗಿದೆ. ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರವಾಗಿ ಅಬ್ದುಲ್ ರಹಿಮಾನ ಕೊಲೆ ನಡೆದಿದೆ ಎಂಬ ಆರೋಪ ಕೋಮು ಸಾಮರಸ್ಯ ಕದಡುವಂತೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ರನ್ನು ಬದಲಿಸಬೇಕು ಅಂತಾ ಸ್ಥಳೀಯ ಕಾಂಗ್ರೆಸ್ ಮುಸ್ಲಿಂ ಮುಖಂಡರು ಪಟ್ಟುಹಿಡಿದಿದ್ದರು. ಬಳಿಕ ಮಂಗಳೂರಿಗೆ ಭೇಟಿ ನೀಡಿದ್ದ ಸಚಿವ, ಪ್ರಚೋದನಕಾರಿ ಭಾಷಣ ಮಾಡುವವರನ್ನು ಮಟ್ಟಹಾಕ್ತೀವಿ ಎಂದಿದ್ದರು. ಇದೆಲ್ಲದರ ಮಧ್ಯೆ ಇದೀಗ 15 ಜನ ಹಿಂದೂ ಸಂಘಟನೆ ಕಾರ್ಯಕರ್ತರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆಗಳು ಹಿನ್ನೆಲೆ ರಾತ್ರೋರಾತ್ರಿ ಹಿಂದೂ ಸಂಘಟನೆ ಮುಖಂಡರ ಮನೆಗಳಿಗೆ ನೂತನ ಎಸ್ಪಿ ಭೇಟಿ ನೀಡಿದ್ದಾರೆ. ಹೀಗಾಗಿ ಪೊಲೀಸರು ಮಧ್ಯರಾತ್ರಿ ಮನೆಗೆ ಆಗಮಿಸುತ್ತಿದ್ದಾರೆ ಅಂತಾ ಕಾರ್ಯಕರ್ತರು ಆರೋಪಿಸಿದ್ದಾರೆ. ಪೊಲೀಸರ ಈ ನಡೆ ವಿರೋಧಿಸಿ ಠಾಣೆ ಎದುರು ಹಾಜರಾಗಿದ್ದಕ್ಕೆ ಎಫ್ಐಆರ್ ದಾಖಲಿಸಲಾಗಿದೆ. ಯಾವುದೇ ಪೂರ್ವಾನುಮತಿ ಪಡೆಯದೇ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಕಡಬ ಠಾಣೆಯ ಮುಂಭಾಗದಲ್ಲಿ ಕಾನೂನು ಬಾಹಿರವಾಗಿ ಪ್ರತಿಭಟನೆ ನಡೆಸಿರುತ್ತಾರೆ ಅಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯಾರೆಲ್ಲಾ ವಿರುದ್ಧ ಎಫ್ಐಆರ್?
ಪ್ರಮೋದ್ ರೈ ನಂದುಗುರಿ, ತಿಲಕ್ ನಂದುಗುರಿ, ಮೋಹನ ಕೆರೆಕೋಡಿ, ಚಂದ್ರಶೇಖರ ನೂಜಿಬಾಳ್ತಿಲ, ಮಹೇಶ್ ಕುಟ್ರುಪ್ಪಾಡಿ, ಡೀಕಯ್ಯ ನೂಜಿಬಾಳ್ತಿಲ, ಸುಜಿತ್ ಕುಟ್ರುಪ್ಪಾಡಿ, ಶರತ್ ನಂದುಗುರಿ, ಶ್ರೇಯತ್, ನಂದುಗುರಿ, ಉಮೇಶ್ ನೂಜಿಬಾಳ್ತಿಲ, ರಾದಾಕೃಷ್ಣ. ಕೆ, ಜಯಂತ್ ಮತ್ತು ಇತರೆ ಮೂವರ ಮೇಲೆ ಎಫ್ಐಆರ್ ದಾಖಲಾಗಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ರಾತ್ರೋರಾತ್ರಿ ಕಡಬ ತಾಲೂಕಿನ ವಿಹೆಚ್ಪಿ ಸಂಘಟನೆ ಮುಖಂಡರ ಮನೆಗಳಿಗೆ ಭೇಟಿ ನೀಡಿ, ಜಿಪಿಎಸ್ ಫೋಟೋ ತೆಗೆದು ಸಂಘಟನೆ ಮುಖಂಡರ ಮಾಹಿತಿ ಸಂಗ್ರಹಿಸುವ ಮೂಲಕ ಎಲ್ಲರ ಮೇಲೆ ಹದ್ದಿನಕಣ್ಣಿಟ್ಟಿದ್ದಾರೆ.