ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ಮಗು ಮೃತಪಟ್ಟ ಘಟನೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ, ಹೊಸ ಸೂಚನೆಗಳನ್ನು ಹೊರಡಿಸಿದೆ. ವಾಹನ ತಪಾಸಣೆ ವೇಳೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ. ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ ಸಲೀಂರಿಂದ ಸುತ್ತೋಲೆ ಹೊರಡಿಸುವ ಮೂಲಕ ಖಡಕ್ ಸೂಚನೆ ನೀಡಲಾಗಿದೆ.
ಮಂಡ್ಯ, ಜೂನ್ 01: ಹೆಲ್ಮೆಟ್ ತಪಾಸಣೆ ಮಾಡುವ ವೇಳೆ ಪೊಲೀಸರು ಮಾಡಿದ ಯಡವಟ್ಟಿನಿಂದ ಜಿಲ್ಲೆಯ ಮದ್ದೂರು ತಾಲೂಕಿ ಗೊರವನಹಳ್ಳಿಯ ಮೂರು ವರ್ಷ ಹೃತೀಕ್ಷ ಎಂಬ ಬಾಲಕಿ ಸಾವನ್ನಪ್ಪಿದ್ದಳು (death). ಸದ್ಯ ಈ ಪ್ರಕರಣದಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆ ಕೆಲ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ ಸಲೀಂರಿಂದ ಸುತ್ತೋಲೆ ಹೊರಡಿಸುವ ಮೂಲಕ ಪೊಲೀಸ್ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ್ದಾರೆ.
ಟ್ರಾಫಿಕ್ ಪೊಲೀಸರು ಸರಿಯಾದ ಸುರಕ್ಷತಾ ಕ್ರಮ ಕೈಗೊಳ್ಳದೇ ಇರುವುದು ಪತ್ತೆ ಆಗಿದೆ. ಪರಿಣಾಮ ಸಾರ್ವಜನಿಕರು ಹಾಗೂ ಪೊಲೀಸರ ಜೀವಕ್ಕೆ ಅಪಾಯ ಉಂಟಾಗುತ್ತಿವೆ. ಈ ನಿಟ್ಟಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗೆ ಕೆಲ ನಿರ್ದೇಶನಗಳನ್ನು ಪಾಲಿಸುವಂತೆ ಸುರಕ್ಷತಾ ಕ್ರಮಗಳ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ.
ಸುತ್ತೋಲೆಯಲ್ಲಿ ಏನಿದೆ?
- ಪೊಲೀಸರು ದಾಖಲೆ ಪರಿಶೀಲನೆಗೆ ಕಾರಣವಿಲ್ಲದೇ ವಾಹನಗಳನ್ನು ತಡೆದು ತಪಾಸಣೆಗೊಳಪಡಿಸುವಂತಿಲ್ಲ.
- ನಿಯಮ ಉಲ್ಲಂಘನೆ ಕಂಡುಬಂದರೆ ಮಾತ್ರವೇ ನಿಲ್ಲಿಸಬೇಕು.
- ರಸ್ತೆಯಲ್ಲಿ ದಿಢೀರನೇ ಅಡ್ಡಬಂದು ವಾಹನ ನಿಲ್ಲಿಸುವಂತಿಲ್ಲ.
- ಬೈಕ್ನ ಹಿಂಬದಿ ಸವಾರನನ್ನು ಹಿಡಿದು ಎಳೆಯುವಂತಿಲ್ಲ, ವಾಹನಗಳ ಕೀ ತೆಗೆದುಕೊಳ್ಳುವಂತಿಲ್ಲ.
- ವೇಗವಾಗಿ ಚಲಾಯಿಸಿಕೊಂಡು ಬರುವ ವಾಹನ ಬೆನ್ನತ್ತುವಂತಿಲ್ಲ. ಬದಲಿಗೆ ವಾಹನದ ನೋಂದಣಿ ಸಂಖ್ಯೆ ಗುರುತಿಸಿ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಬೇಕು.
- ಹೆದ್ದಾರಿಗಳಲ್ಲಿ ಜಿಗ್ಜಾಗ್ ಬ್ಯಾರಿಕೇಡ್ ಹಾಕುವಂತಿಲ್ಲ. ಬ್ಯಾರಿಕೇಡ್ಗಳನ್ನ ಹಾಕಿ ವಾಹನಗಳನ್ನ ತಡೆಯಬಾರದು.
- ತಪಾಸಣೆ ವೇಳೆ ರಿಫ್ಲೆಕ್ಟಿವ್ ಜಾಕೆಟ್ ಧರಿಸಿರಬೇಕು.
- ಕಡ್ಡಾಯವಾಗಿ LED ಬಟನ್ ಗಳನ್ನು ಉಪಯೋಗಿಸಬೇಕು.
- ತಪಾಸಣೆ ವೇಳೆ ಖಡ್ಡಾಯ ಬಾಡಿ ವೋರ್ನ್ ಕ್ಯಾಮೆರಾ ಧರಿಸಿರಬೇಕು.
- ಐಟಿಎಂಎಸ್ ಮೂಲಕ ಪ್ರಕರಣ ದಾಖಲಿಸಬೇಕು.
- ಅನಾಹುತಗಳನ್ನು ತಪ್ಪಿಸಲು ಸಂಚಾರ ನಿಯಮ ಪಾಲನೆಗೆ ಜಾಗೃತಿ ಕಾರ್ಯಕ್ರಮ ಕೈಗೊಳ್ಳುವುದು.
- ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಅತಿ-ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವಂತಿಲ್ಲ. ಅಂತವರ ವಿರುದ್ಧ ಎಫ್.ಟಿ.ವಿ.ಆರ್ ದಾಖಲಿಸಲು ತಂತ್ರಜ್ಞಾನ ಆಧಾರಿತ ನಿಯಮ ಅನುಸರಿಸುವುದು.
- ವಾಹನಗಳ ವೇಗವನ್ನು ಇಳಿಸಲು 150 ಮೀಟರ್ ಮೊದಲೇ ರಿಫ್ಲೆಕ್ಟಿವ್ ಅಳವಡಿಸುವುದು.
- ರಾತ್ರಿ ವೇಳೆ ಸಂಚಾರ ಸಿಗ್ನಲ್ ಜಂಕ್ಷನ್ಗಳ ಬದಿಯಲ್ಲೇ ವಾಹನಗಳನ್ನು ತಪಾಸಣೆ ಮಾಡಬೇಕು.
- ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ನಾಕಾಬಂಧಿ ಪ್ರಕ್ರಿಯೆಗಳನ್ನು ಹೆದ್ದಾರಿಗಳಲ್ಲಿ ನಡೆಯಬಾರದು.
- ತಪಾಸಣೆಯ ಸಂದರ್ಭದಲ್ಲಿ ಸಂಚಾರ ಪೊಲೀಸರ ಸಹಕಾರ ಪಡೆದುಕೊಳ್ಳಬೇಕು. ಸುತ್ತೋಲೆಯ ಎಲ್ಲಾ ಅಂಶಗಳ ಖಡ್ಡಾಯ ಪಾಲನೆಗೆ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ ಸಲೀಂ ಸೂಚನೆ ನೀಡಿದ್ದಾರೆ.