ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಐದು ಜನರು ಮೃತಪಟ್ಟಿದ್ದಾರೆ. ಭೂಕುಸಿತ, ಪ್ರವಾಹದಿಂದ ಹಲವಾರು ಮನೆಗಳಿಗೆ ಹಾನಿಯಾಗಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಳೆಯಿಂದಾಗಿ ಮೃತಪಟ್ಟಿರುವ ಕುಟುಂಬಗಳಿಗೆ ಸರ್ಕಾರ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಮಂಗಳೂರು, ಮೇ 30: ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ತಡರಾತ್ರಿ ಸುರಿದ ಮಳೆ ಆರ್ಭಟಕ್ಕೆ ಜನರು ನಲುಗಿ ಹೋಗಿದ್ದಾರೆ. ನಿರಂತರ ಮಳೆಗೆ ಜಲ ಪ್ರವಾಹ ಉಂಟಾಗಿದೆ. ನೂರಾರು ಮನೆಗಳಿಗೆ ನೀರು ನುಗ್ಗಿದೆ. ಹಲವೆಡೆ ಗುಡ್ಡ ಕುಸಿದಿದೆ. ಉಳ್ಳಾಲ, ಕಲ್ಲಾಪು, ಬಿಗಂಬಿಲ, ಪಿಲಾರ್, ತಲಪಾಡಿ, ಅಂಬಿಕಾರಸ್ತೆ, ಕೋಟೆಕಾರು, ಪಾವೂರು, ಹರೇಕಳದ ಜನರು ಹೈರಾಣಾಗಿದ್ದಾರೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಒಂದೇ ದಿನ ಐವರು ಮೃತಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಳೆಯಾಗುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ (Red Alert) ಘೋಷಿಸಿದೆ. ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.
ಮಳೆಯಿಂದ ಐವರ ಸಾವು
ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಮಳೆಯಿಂದ ನಸುಕಿನ ಜಾವ 4:30ರ ಸುಮಾರಿಗೆ ಗುಡ್ಡ ಕುಸಿದು, ಪಕ್ಕದಲ್ಲೇ ಇದ್ದ ಕಾಂತಪ್ಪ ಪುಜಾರಿ ಎಂಬುವರ ಮನೆ ಮೇಲೆ ಬಿದ್ದಿದೆ. ಗುಡ್ಡ ಕುಸಿಯುವ ಶಬ್ಧ ಕೇಳಿ ಕಾಂತಪ್ಪ ಪೂಜಾರಿ ಎದ್ದು ಹೊರಗೆ ಓಡಿ ಬರುವಷ್ಟರಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದಿದೆ. ಕಾಂತಪ್ಪ ಪೂಜಾರಿ ಅವರ ಮೇಲೆ ಮನೆಯ ಸ್ಲ್ಯಾಬ್ ಬಿದ್ದಿದೆ. ಇದರಿಂದ ಕಾಂತಪ್ಪ ಪೂಜಾರಿ ಅವರು ಕಾಲು ಮುರಿದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೆ ಕುಸಿದು ಕಾಂತಪ್ಪ ಪೂಜಾರಿ ಪತ್ನಿ ಪ್ರೇಮಾ ಮೃತಪಟ್ಟಿದ್ದಾರೆ. ಇನ್ನು, ಕಾಂತಪ್ಪ ಪೂಜಾರಿ ಪುತ್ರ ಸೀತಾರಾಮ್ ಪೂಜಾರಿ ಮತ್ತು ಸೊಸೆ ಅಶ್ವಿನಿ ಪರಾಗಿದ್ದಾರೆ. ಆದರೆ, ಸೀತಾರಾಮ್ ಪೂಜಾರಿ ಮತ್ತು ಅಶ್ವಿನಿ ಪೂಜಾರಿ ದಂಪತಿಯ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಅಜ್ಜಿ ಪ್ರೇಮಾ ಪೂಜಾರಿ, ಮೊಮ್ಮಕ್ಕಳಾದ ಆರ್ಯನ್ ಮತ್ತು ಆರುಷ್ ಮೃತರು
ಸಹಾಯಕ ಪವರ್ ಮ್ಯಾನ್ ಸಾವು
ಬೆಳ್ತಂಗಡಿ ತಾಲೂಕಿನ ಓಡಿನ್ಮಾಳ ಗ್ರಾಮದ ಕುಮ್ಮಂಜ ಎಂಬಲ್ಲಿ ವಿದ್ಯುತ್ ಶಾಕ್ ಹೊಡೆದು ಪವರ್ (ಲೈನ್) ಮ್ಯಾನ್ ಮೃತಪಟ್ಟಿದ್ದಾರೆ. ವಿಜೇಶ್ ಜೈನ್ (27) ಮೃತ ಪವರ್ ಮ್ಯಾನ್. ಕೆಂಜಿಲ ಮನೆ ನಿವಾಸಿ ಸುಕುಮಾರ್ ಜೈನ್ ಮತ್ತು ಪೂರ್ಣಿಮಾ ದಂಪತಿಯ ಎರಡನೇ ಪುತ್ರ ವಿಜೇಶ್ ಜೈನ್ ಹೈಟೆನ್ಷನ್ ವಿದ್ಯುತ್ ಲೈನ್ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಪೌಂಡ್ ಕುಸಿದು ಬಾಲಕಿ ಸಾವು
ಗುರುವಾರ ರಾತ್ರಿ ಸುರಿದ ಮಳೆಗೆ ದೇರಳಕಟ್ಟೆ ಬಳಿಯ ಮೊಂಟೆಪದವು ಕೋಡಿಯಲ್ಲಿನ ಮನೆಯೊಂದರ ಕಾಂಪೌಂಡ್ ಮೇಲೆ ಗುಡ್ಡ ಕುಸಿದಿದೆ. ಕಾಂಪೌಂಡ್ ಬಾಲಕಿ ಮೇಲೆ ಬಿದ್ದು ಬಾಲಕಿಯ ಪ್ರಾಣ ಪಕ್ಷಿ ಹಾರಿಹೋಗಿದೆ.
5 ಲಕ್ಷ ರೂಪಾಯಿ ಪರಿಹಾರ ಘೋಷಣೆ
ಈ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲೆಗೆ ದೌಡಾಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಮೃತ ಕುಟುಂಬಕ್ಕೆ ಸರ್ಕಾರದಿಂದ ತಲಾ ಐದು ಲಕ್ಷ ರೂಪಾಯಿ ಘೋಷಣೆ ಘೋಷಿಸಿದ್ದಾರೆ.
ಗುಡ್ಡ ಕುಸಿತ, ಮುಳುಗಿದ ಮನೆಗಳು
ಉಳ್ಳಾಲ ತಾಲೂಕಿನ ಕೆ.ಸಿ ರೋಡ್ನಲ್ಲಿರುವ ಮನೆಯೊಂದರ ಮೇಲೆ ಗುಡ್ಡ ಕುಸಿದಿದೆ. ಇದರಿಂದ ಮನೆ ಬಳಿ ನಿಲ್ಲಿಸಿದ್ದ ಬೈಕ್ ಜಖಂಗೊಂಡಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ನೀರುಪಾಲಾಗಿವೆ. ಇನ್ನು, ಮಂಗಳೂರು ಹೊರವಲಯದ ಪಾವೂರಿನಲ್ಲಿ ಗುಡ್ಡ ಕುಸಿದ ಎರಡು ಮನೆಗಳಿಗೆ ಹಾನಿಯಾಗಿದೆ. ಮನೆ ಪಕ್ಕದ ಶೆಡ್ ಸಂಪೂರ್ಣ ಜಖಂ ಆಗಿದೆ. ಮಂಗಳೂರಿನ ಉಳ್ಳಾಲ ಬೈಲ್ನಲ್ಲಿ ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಜನರನ್ನ ಬೋಟ್ಗಳಲ್ಲಿ ಸ್ಥಳಾಂತರಿಸಲಾಗಿದೆ. ಮಂಗಳೂರಿನ ಬಿಜೈ ಬಳಿ ಬೃಹತ್ ಮರ ಕುಸಿದು ಎರಡು ಕಾರು ಜಖಂ ಆಗಿವೆ. ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರೆಡ್ ಅಲರ್ಟ್, ಶಾಲೆ-ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಅಂಗನವಾಡಿಯಿಂದ ಪದವಿಪೂರ್ವ ಕಾಲೇಜುವರೆಗೆ ರಜೆ ಘೋಷಣೆ ಮಾಡಿದೆ.