ಕೊಣಾಜೆ: ಉಳ್ಳಾಲದ ಮಂಜನಾಡಿ ಗ್ರಾಮದ ಮೊಂಟೆಪದವು ಕೋಡಿಯಲ್ಲಿ ಗುಡ್ಡ ಜರಿದು ಸೀತಾರಾಂ ಮನೆಯವರು ಅವಶೇಷಗಳಡಿ ಸಿಲುಕಿಕೊಂಡ ಘಟನೆ ನಡೆದಿದೆ. ಮಣ್ಣಿನಡಿ ಸಿಲುಕಿ ಸೀತಾರಾಂ ತಾಯಿ ಪ್ರೇಮ (50) ಹಾಗೂ ಮಗ ಆರ್ಯನ್(2) ಮೃತಪಟ್ಟಿದ್ದಾರೆ. ಇವರ ತಂದೆ ಕಾಂತಪ್ಪ ಪೂಜಾರಿ ಅವರ ಕಾಲು ಮುರಿದಿದೆ. ಸೀತಾರಾಂ ಅವರ 2ನೇ ಮಗನನ್ನು ರಕ್ಷಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ. ಇನ್ನು ಪತ್ನಿ ಅಶ್ವಿನಿ ಅದೇ ಅವಶೇಷಗಳಡಿ ಸಿಲುಕಿದ್ದು, ಸ್ಥಳೀಯರು, ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್, ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.


ಭಾರಿ ಮಳೆಗೆ ತಡರಾತ್ರಿ ಕುಸಿದು ಬಿತ್ತು ಗುಡ್ಡ: ಮನೆಯೇ ಸರ್ವನಾಶ: ಉಳ್ಳಾಲ ತಾಲೂಕಿನ ಉರುಮನೆ ಕೋಡಿ ಎಂಬಲ್ಲಿ ಮಳೆಯಿಂದ ಗುಡ್ಡ ಕುಸಿದು, ಪಕ್ಕದಲ್ಲೇ ಇದ್ದ ಕಾಂತಪ್ಪ ಪುಜಾರಿ ಅನ್ನೋರ ಮನೆಮೇಲೆ ಬಿದ್ದಿದೆ. ಗುಡ್ಡ ಕುಸಿಯುವ ದೊಡ್ಡ ಶಬ್ಧ ಕೇಳಿ ಕಾಂತಪ್ಪ ಪೂಜಾರಿ ಎದ್ದು ಹೊರಗೆ ಓಡಿ ಬಂದಿದ್ದಾರೆ. ಅಷ್ಟರಲ್ಲೇ ಗುಡ್ಡದ ಹೊಡೆತಕ್ಕೆ ಇಡೀ ಮನೆಯೇ ಕುಸಿದು ಬಿದ್ದಿದೆ. ಕಾಂತಪ್ಪ ಪೂಜಾರಿ ಹೊರಗೆ ಓಡಿ ಬರುಷ್ಟರಲ್ಲಿ ಅವರ ಮೇಲೂ ಮನೆಯ ಸ್ಲ್ಯಾಬ್ ಬಿದ್ದಿದೆ. ಸದ್ಯ ಕಾಂತಪ್ಪ ಪೂಜಾರಿ ಕಾಲು ಮುರಿದಿದ್ದು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಮನೆ ಕುಸಿದು ಕಾಂತಪ್ಪ ಪೂಜಾರಿ ಪತ್ನಿ ಪ್ರೇಮಾ ಮೃತಪಟ್ಟಿದ್ದಾರೆ.
ನನ್ನನ್ನ ಬಿಡಿ, ಮಕ್ಕಳನ್ನ ಉಳಿಸಿ ಅಂತಾ ಅಂಗಲಾಚಿದ ತಾಯಿ : ಇನ್ನು ವಿಷ್ಯ ತಿಳಿದು ಆಸೀಫ್ ಅನ್ನೋ ಸ್ಥಳೀಯರು ತಾಯಿ ಮಗು ಸಿಲುಕಿದ ಸ್ಥಳಕ್ಕೆ ಕಷ್ಟ ಪಟ್ಟು ತೆರಳಿದ್ದಾರೆ. ಈ ವೇಳೆ ತಾಯಿ ಅಶ್ವಿನಿಗೆ ನೀರು ಕೊಟ್ಟು ಸಂತೈಸಿದ್ದಾರೆ. ಆದರೆ ಮನೆಯೇ ಆಕೆ ಮೇಲೆ ಕುಸಿದು ಅರ್ಧ ಮಾತ್ರ ಹೊರಗೆ ಇದ್ದಿದ್ರಿಂದ ಆಕೆಯನ್ನ ಹೊರಗೆ ತೆಗೆಯಲು ಆಗಲಿಲ್ಲ. ಈ ವೇಳೆ ಈ ತಾಯಿ ನನ್ನನ್ನ ಬಿಟ್ಟು ಬಿಡಿ, ಮಕ್ಕಳನ್ನ ರಕ್ಷಿಸಿ ಅಂತಾ ಅಂಗಲಾಚಿದ್ದರು.
ದುರಂತ ಅಂದರೆ ಮನೆ ಕುಸಿದು ಅಸ್ವಸ್ಥಗೊಂಡಿದ್ದ ಅಶ್ವಿನಿಯ ಪುತ್ರ ಆರ್ಯನ್ ಕೊನೆಯುಸಿರು ಎಳೆದಿದ್ದ. ನಿರಂತರ ಕಾರ್ಯಾಚರಣೆ ನಡೆಸಿ, ಆರ್ಯನ್ ಮೃತದೇಹವನ್ನ ಹೊರಗೆ ತೆಗೆಯಲಾಗಿತ್ತು. ಬಳಿಕ ಕೆಲವೇ ಹೊತ್ತಿನಲ್ಲಿ ಅಶ್ವಿನಿ ತೋಳಿನಲ್ಲಿದ್ದ ಮತ್ತೊಂದು ಮಗು ಆರುಷ್ನನ್ನ ಎಸ್ಡಿಆರ್ಎಫ್, ಎನ್ಡಿಆರ್ಎಫ್ ಸಿಬ್ಬಂದಿ ರಕ್ಷಣೆ ಮಾಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದೆ.
ಈ ಬಗ್ಗೆ ರಕ್ಷಣಾ ತಂಡದ ಭಾಗವಾಗಿರುವ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯ ಡಾ.ವಿಕ್ರಂ ಶೆಟ್ಟಿ ಮಾಹಿತಿ ನೀಡಿದ್ದು, ಒಂದು ಮಗು ಮೃತಪಟ್ಟಿದೆ. ಅವಶೇಷಗಳಡಿ ಸಿಲುಕಿರುವ ಇನ್ನೊಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಮಕ್ಕಳ ತಾಯಿ ಅಶ್ವಿನಿ ಉಸಿರಾಡುತ್ತಿದ್ದು, ಕೈಗಳನ್ನು ಅಲ್ಲಾಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.