
ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ನ ಕ್ವಾಲಿಫೈಯರ್-1ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿಜಯ ಸಾಧಿಸಿ ನೇರವಾಗಿ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಇದರಿಂದ 2009, 2011, 2016ರ ಬಳಿಕ 4ನೇ ಬಾರಿಗೆ ಆರ್ಸಿಬಿ ಫೈನಲ್ಗೆ ಹೋಗಿದೆ. ಇದರಿಂದ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಸಂತಸ ಮೂಡಿದೆ.
ಮುಲ್ಲನಪುರದ ನ್ಯೂ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ರಜತ್ ಪಾಟಿದಾರ್, ಬೌಲಿಂಗ್ ಆಯ್ಕೆ ಮಾಡಿದರು. ಇದರಿಂದ ಪಂಜಾಬ್ ಕಿಂಗ್ಸ್ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಪ್ರಿಯಾಂಶ್ ಆರ್ಯ 7, ಪ್ರಭಾಸಿಮ್ರಾನ್ ಸಿಂಗ್ 18 ರನ್ಗೆ ಔಟ್ ಆದರು. ನಂತರ ನಾಯಕ ಶ್ರೇಯಸ್ ಅಯ್ಯರ್ ಕೂಡ ಕೇವಲ 2 ರನ್ಗೆ ಡ್ರೆಸ್ಸಿಂಗ್ ರೂಮ್ನತ್ತ ಹೆಜ್ಜೆ ಹಾಕಿದರು. ಇವರ ಬೆನ್ನಲ್ಲೇ ಜೋಶ್ ಇಂಗ್ಲಿಷ್ ಕೇವಲ 4 ರನ್ಗೆ ವಿಕೆಟ್ ಕಳೆದುಕೊಂಡರು.
ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದ ನೆಹಾಲ್ ವಧೇರಾ, ಯಶ್ ದಯಾಳ್ ಬೌಲಿಂಗ್ನಲ್ಲಿ ಬೋಲ್ಡ್ ಆದರು, ಸುಯಶ್ ಶರ್ಮಾ ಬೌಲಿಂಗ್ನಲ್ಲಿ ಶಶಾಂಕ್ ಸಿಂಗ್ 3, ಮುಶೀರ್ ಖಾನ್, ಮಾರ್ಕಸ್ ಸ್ಟೊಯಿನಿಸ್ ಔಟ್ ಆದರು. ಇದರಿಂದ ಪಂಜಾಬ್ ಕಿಂಗ್ಸ್ ಕೇವಲ 14.1 ಓವರ್ಗಳಲ್ಲಿ ಆಲೌಟ್ ಆಗಿ 102 ರನ್ಗಳ ಟಾರ್ಗೆಟ್ ಅನ್ನು ಆರ್ಸಿಬಿಗೆ ನೀಡಿತ್ತು.

ಈ ಸುಲಭ ಟಾರ್ಗೆಟ್ ಅನ್ನು ಚೇಸ್ ಮಾಡಿದ ಆರ್ಸಿಬಿ 10 ಓವರ್ಗೆ ಎರಡು ವಿಕೆಟ್ ಕಳೆದುಕೊಂಡು 106 ರನ್ ಗಳಿಸುವ ಮೂಲಕ ಜಯ ಸಾಧಿಸಿತು. ಆರ್ಸಿಬಿ ಪರವಾಗಿ ಓಪನರ್ಸ್ ವಿರಾಟ್ ಕೊಹ್ಲಿ ಅವರು ಕೇವಲ 12 ರನ್ಗೆ ಔಟ್ ಆದ್ರೆ, ಫಿಲ್ ಸಾಲ್ಟ್ ಘರ್ಜನೆ ಜೋರಾಗಿ ಇತ್ತು. 3ನೇ ಬ್ಯಾಟರ್ ಆಗಿ ಕಣಕ್ಕೆ ಇಳಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು 19 ರನ್ಗೆ ಶ್ರೇಯಸ್ ಅಯ್ಯರ್ಗೆ ಕ್ಯಾಚ್ ಕೊಟ್ಟು ನಿರಾಸೆಗೆ ಒಳಗಾದರು.
ಮಯಾಂಕ್ ಅಗರ್ವಾಲ್ ನಂತರ ನಾಯಕ ರಜತ್ ಪಾಟಿದಾರ್ ಬ್ಯಾಟಿಂಗ್ಗೆ ಬಂದರು. ಇನ್ನು ಓಪನರ್ ಆಗಿ ಬ್ಯಾಟಿಂಗ್ಗೆ ಬಂದಿದ್ದ ಫಿಲ್ ಸಾಲ್ಟ್, ಪಂಜಾಬ್ ಬೌಲರ್ಗಳಿಗೆ ಮನ ಬಂದಂತೆ ಚಚ್ಚಿದರು. ಕೇವಲ 27 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಆಕಾಶದೆತ್ತರದ ಸಿಕ್ಸರ್ಗಳಿಂದ 56 ರನ್ಗಳನ್ನು ಬಾರಿಸಿ ಅಜೇಯರಾಗಿ ಉಳಿದರು. ರಜತ್ ಪಾಟಿದಾರ್ ಕೊನೆಗೆ ಸಿಕ್ಸರ್ ಬಾರಿಸೋ ಮೂಲಕ ಆರ್ಸಿಬಿಗೆ ಜಯ ತಂದರು. ಈ ಜಯದೊಂದಿಗೆ ಆರ್ಸಿಬಿ ಐಪಿಎಲ್ ಇತಿಹಾಸಲ್ಲಿ 4ನೇ ಬಾರಿಗೆ ಫೈನಲ್ಗೆ ಎಂಟ್ರಿ ಕೊಟ್ಟಂತೆ ಆಗಿದೆ.