ಮಂಗಳೂರಿನ ಬಂಟ್ವಾಳ ಬಳಿಯ ಕೊಲ್ತಮಜಲುನಲ್ಲಿ ಅಮಾಯಕ ಮುಸ್ಲಿಂ ಯುವಕ ಅಬ್ದುಲ್ ರಹೀಂ ಅವರ ಕೊಲೆಯಿಂದ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಉಳ್ಳಾಲ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಮೀರ್ ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ಘೋಷಿಸಿದ್ದಾರೆ. ಮ್ಯಾಗಿ ರೀತಿ ದುಷ್ಕರ್ಮಿಗಳಿಗೆ
ಶರಣ್ ಪಂಪ್‌ವೆಲ್‌ನಂತಹ ದುಷ್ಕರ್ಮಿಗಳ ಮೇಲೆ ಪ್ರಕರಣ ದಾಖಲಾದರೂ, ಎರಡೇ ನಿಮಿಷಗಳಲ್ಲಿ ಮ್ಯಾಗಿ ತಯಾರು ಮಾಡುವಂತೆ ಜಾಮೀನು ದೊರೆಯುವ ವ್ಯವಸ್ಥೆಯಿಂದ ತಾನು ಬೇಸೆತ್ತಿದ್ದು, ಜನರಲ್ಲಿ ಕಾನೂನಿನ ಮೇಲಿನ ನಂಬಿಕೆ ಕಡಿಮೆಯಾಗಿದೆ. ಈ ಘಟನೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಜುಗರವಾಗಿದೆ ಎಂದು ಶಮೀರ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ
ಈ ಬಗ್ಗೆ ಅವರು ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ, “ಕಾಂಗ್ರೆಸ್ ಸರ್ಕಾರದ ವಿಫಲತೆಯಿಂದಾಗಿ ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಲು ಯಾವುದೇ ತೀವ್ರ ಕ್ರಮ ಕೈಗೊಳ್ಳಲಾಗಿಲ್ಲ. ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ಸರ್ಕಾರವು ಕೋಮುವಾದಿಗಳ ಹೆಡೆಮುರಿಯನ್ನು ಕಟ್ಟಿಹಾಕಲು ಯಾವುದೇ ಪರಿಣಾಮಕಾರಿ ಕೆಲಸ ಮಾಡಿಲ್ಲ, ಇದರಿಂದ ಜನರಲ್ಲಿ ತೀವ್ರ ಅಸಮಾಧಾನ ಮೂಡಿದೆ” ಎಂದು ಹೇಳಿದ್ದಾರೆ.
“ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನಿಷ್ಕ್ರಿಯ ಆಡಳಿತವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ. ಇದರಿಂದ ಆರೆಸ್ಸೆಸ್‌ನಂತಹ ಸಂಘಟನೆಗಳ ಗೂಂಡಾಗಳಿಗೆ ಮುಕ್ತ ಚಲನೆಯ ಸ್ವಾತಂತ್ರ್ಯ ದೊರೆತಂತಾಗಿದೆ. ಇದು ಸರ್ಕಾರದ ದೌರ್ಬಲ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನಿರ್ಲಕ್ಷ್ಯದ ಧೋರಣೆಯೂ ಜನರಲ್ಲಿ ಅಸಮಾಧಾನವನ್ನು ತಂದಿದೆ.” ಎಂದು ಅವರು ಹೇಳಿದ್ದಾರೆ.
“ಕರಾವಳಿಯಲ್ಲಿ ಕೋಮು ಗಲಭೆಗಳನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳದಿರುವುದು ಕಾಂಗ್ರೆಸ್ ಪಕ್ಷದ ಶಕ್ತಿಹೀನತೆಯನ್ನು ಎತ್ತಿ ತೋರಿಸುತ್ತದೆ. ಪೊಲೀಸ್ ಇಲಾಖೆಯು ಸರ್ಕಾರದ ಹಿಡಿತದಲ್ಲಿಲ್ಲದಿರುವುದು ಗಂಭೀರ ಕಳವಳದ ವಿಷಯವಾಗಿದೆ. ಶರಣ್ ಪಂಪ್‌ವೆಲ್ ಮತ್ತು ಶ್ರೀಕಾಂತ್ ಶೆಟ್ಟಿಯಂತಹ ದುಷ್ಕರ್ಮಿಗಳು ಗಲಭೆಗೆ ಪ್ರಚೋದನೆ ನೀಡುತ್ತಿದ್ದರೂ, ಅವರು ಸ್ವಚ್ಛಂದವಾಗಿ ತಿರುಗಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಸರ್ಕಾರದ ವಿಫಲತೆಯನ್ನು ಸೂಚಿಸುತ್ತದೆ.” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳ ಹಾವಳಿಯಿಂದ ದಿನಗೂಲಿ ಕಾರ್ಮಿಕರು ಮತ್ತು ಅಮಾಯಕ ನಾಗರಿಕರು ಭಯದಿಂದ ಬದುಕುವಂತಾಗಿದೆ. ಸಂಘಪರಿವಾರದ ರೌಡಿಗಳನ್ನು ಎದುರಿಸಲು ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ರಾಜಕೀಯ ಇಚ್ಛಾಶಕ್ತಿ ಇಲ್ಲವೆಂದು ತೋರುತ್ತಿದೆ. ಇದರಿಂದ ಜನರು ಸರ್ಕಾರದ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ, ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಜನರ ಮುಂದೆ ತಲೆ ಎತ್ತಿಕೊಂಡು ನಿಲ್ಲಲು ಕಷ್ಟವಾಗಿದೆ.” ಎಂದು ಅವರು ಹೇಳಿದ್ದಾರೆ.
ಈ ಎಲ್ಲಾ ಕಾರಣಗಳಿಂದಾಗಿ, ಕಾಂಗ್ರೆಸ್ ಸರ್ಕಾರದ ಈಗಿನ ಆಡಳಿತದ ನೀತಿಗಳೊಂದಿಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ ಶಮೀರ್ ಅವರು, ಪ್ರಸ್ತುತ ಸ್ಥಿತಿಯಲ್ಲಿ, ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ, ತನ್ನೊಂದಿಗೆ ಹಲವು ಯುವ ಕಾಂಗ್ರೆಸ್ ಕಾರ್ಯಕರ್ತರೂ ರಾಜೀನಾಮೆ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ