ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಬರ್ಬರ ಹತ್ಯೆ ಬೆನ್ನಲ್ಲೇ ಮುಸ್ಲಿಂ ಸಮುದಾಯದ ಜನರು ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸದಿರುವುದಕ್ಕೆ ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಇಂದಿನಿಂದ ಮೇ 30ರ ಸಂಜೆ ಆರು ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಜಾರಿಗೊಳಿಸಲಾಗಿದೆ.
ಮಂಗಳೂರು, ಮೇ 27: ಬಂಟ್ವಾಳ (Bantwala) ತಾಲೂಕಿನ ಇರಾಕೋಡಿ ಎಂಬಲ್ಲಿ ನಡೆದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ (Prohibition) ಜಾರಿ ಮಾಡಲಾಗಿದೆ. ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಬಿಎನ್ಎಸ್ 163ರ ಅಡಿ ಮೇ.30ರ ಸಂಜೆ 6 ಗಂಟೆಯವೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಪ್ರಭಾರ ಜಿಲ್ಲಾಧಿಕಾರಿ ಆನಂದ್ ಕೆ. ಆದೇಶ ಹೊರಡಿಸಿದ್ದಾರೆ
ಹೆಚ್ಚುವರಿ ಪೊಲೀಸ್ ಪಡೆ ತರಿಸಿಕೊಳ್ಳಲು ನಿರ್ಧಾರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಾದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಜಿಲ್ಲಾದ್ಯಂತ ಭಿಗಿ ಪೊಲೀಸ್ ಬಂದೋಬಸ್ತ್ಗೆ ಕ್ರಮ ಕೈಗೊಳ್ಳಲಾಗಿದೆ. ಉಡುಪಿ, ಚಿಕಮಗಳೂರು, ಮೈಸೂರು, ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಪಡೆ ತರಿಸಿಕೊಳ್ಳಲು ನಿರ್ಧರಿಸಲಾಗಿದೆ. ಆಯಕಟ್ಟಿನ ಸ್ಥಳಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದೆ. ಅನುಮಾನಾಸ್ಪದ ಚಟುವಟಿಕೆ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.
ಪ್ರಕರಣದ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಮಾತನಾಡಿ, ಮಧ್ಯಾಹ್ನ ಮರಳು ಸಾಗಾಟಕ್ಕೆಂದು ಹೋದಾಗ ಕೃತ್ಯ ನಡೆದಿದೆ. ರಹೀಮ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಇನ್ನೊಬ್ಬನಿಗೆ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೊಲೆಯ ಕಾರಣ ಮತ್ತು ಆರೋಪಿಗಳ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು. ಬಂಟ್ವಾಳ ಡಿವೈವೆಸ್ಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ. ಶಂಕಿತರನ್ನು ಕರೆದು ವಿಚಾರಣೆ ಮಾಡುತ್ತಿದ್ದೇವೆ.
ಆಸ್ಪತ್ರೆ ಬಳಿ ಸೇರಿದ ನೂರಾರು ಜನ, ಆಕ್ರೋಶ
ಅಬ್ದುಲ್ ರಹೀಮ್ ಮೃತದೇಹ ಮಂಗಳೂರಿನ ದೇರಳಕಟ್ಟೆ ಯೆನಪೋಯ ಆಸ್ಪತ್ರೆಯ ಶವಾಗಾರದಲ್ಲಿದೆ. ಈ ವಿಚಾರ ತಿಳಿದು ಶವಗಾರದ ಬಳಿ ನೂರಾರು ಜನ ಮುಸ್ಲಿಮರು ಜಮಾಯಿಸಿದ್ದಾರೆ. ಕೆಲ ಯುವಕರು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿ ಸ್ಟಾರ್ ಸೇರಿದಂತೆ ಕೆಲ ಮುಸ್ಲಿಂ ಮುಖಂಡರನ್ನು ಸುತ್ತುವರಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಬುಧವಾರ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಮಾಡುವುದಾಗಿ ಮುಸ್ಲಿಮರು ಎಚ್ಚರಿಕೆ ನೀಡಿದ್ದಾರೆ.
ಅಬ್ದುಲ್ ರಹಿಮಾನ್ ಹತ್ಯೆಗೆ ಗುಂಡೂರಾವ್ ಖಂಡನೆ
ಮಂಗಳೂರಿನ ಬಂಟ್ವಾಳದ ಕೊಳತ್ತಮಜಲು ಬಳಿ ಅಬ್ದುಲ್ ರಹಿಮಾನ್ ಎಂಬ ಯುವಕನ ಹತ್ಯೆಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ DG &IGP ಹಾಗೂ ಕಾನೂನು ಸುವ್ಯವಸ್ಥೆ ADGP ಅವರಿಗೆ ದೂರವಾಣಿ ಮೂಲಕ ಮಾತನಾಡಿದ ಸಚಿವರು, ಸೂಕ್ತ ಬಿಗಿ ಕಾನೂನು ಕ್ರಮಗಳನ್ನ ಜರುಗಿಸುವಂತೆ ಸೂಚನೆ ನೀಡಿದರು. ಅಲ್ಲದೇ ಮಂಗಳೂರು ಜಿಲ್ಲಾಧಿಕಾರಿ ಹಾಗೂ ಎಸ್.ಪಿ ಅವರೊಂದಿಗೆ ಮಾತನಾಡಿದ ಸಚಿವರು ಮಂಗಳೂರಿನಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಸೂಚನೆ ನೀಡಿದರು. ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ನಿಗಾ ವಹಿಸಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
15 ಮಂದಿ ವ್ಯವಸ್ಥಿತವಾಗಿ ಹತ್ಯೆ ಮಾಡಿದ್ದಾರೆ: ಎಸ್‌ಡಿಪಿಐ ಜಿಲ್ಲಾಧ್ಯಕ್ಷ
ಕೊಲ್ತಮಜಲು ಬಳಿ ಪಿಕಪ್ ಚಾಲಕನಾಗಿದ್ದ ಮುಸ್ಲಿಂ ಯುವಕನಿಗೆ ಮರಳು ಲೋಡ್ಗೆ ಕರೆದಿದ್ದರು. ಸಂಘ ಪರಿವಾರಕ್ಕೆ ಸೇರಿದ ಗೂಂಡಾ ಪಡೆ ಏಕಾಏಕಿ ತಲವಾರಿನಿಂದ ದಾಳಿ ನಡೆಸಿದೆ. ಅಬ್ದುಲ್ ರಹೀಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಲ ದಿನಗಳಿಂದ ಕೆಲ ಕಿಡಿಗೇಡಿಗಳು ಮುಸ್ಲಿಮರಿಗೆ ಬಹಿರಂಗ ಬೆದರಿಕೆ ಹಾಕುತ್ತಿದ್ದಾರೆ. ರೌಡಿಶೀಟರ್ ಒಬ್ಬನ ಹತ್ಯೆಗೆ ಪ್ರತೀಕಾರವಾಗಿ ಬೆದರಿಕೆ ಹಾಕುತ್ತಿದ್ದಾರೆ. ಮೊನ್ನೆ ಪ್ರತಿಭಟನೆಯಲ್ಲಿ ಶ್ರೀಕಾಂತ್ ಶೆಟ್ಟಿ ಎಂಬಾತ ರಕ್ತಕ್ಕೆ ರಕ್ತ ಅಂತ ಹೇಳಿದ್ದಾನೆ. ಮತ್ತೊಬ್ಬ ಭರತ್ ಕುಮ್ಡೇಲ್ ಎಂಬ ಗೂಂಡಾ ಪೋಸ್ಟ್ಮಾರ್ಟ್ಂ ಕೂಡ ಮಾಡಲು ಆಗದ ರೀತಿಯಲ್ಲಿ ಕೊಲೆ ಮಾಡುತ್ತೇನೆ ಎಂದಿದ್ದಾನೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ವಾಗ್ದಾಳಿ ಮಾಡಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ಬೆದರಿಕೆ ಹಾಕಿದವರ ವಿರುದ್ಧ 45 ಎಫ್ಐಆರ್ ಆಗಿವೆ. ಆದರೆ ಒಬ್ಬಿಬ್ಬರನ್ನು ಬಿಟ್ಟು ಯಾರನ್ನೂ ಬಂಧನ ಮಾಡಲಿಲ್ಲ. ಇವರು ಆ್ಯಂಟಿ ಕಮ್ಯನಲ್ ಟಾಸ್ಕ್ ಫೋರ್ಸ್ ಮಾಡುತ್ತೇವೆ ಅಂತಿದ್ದಾರೆ. ಆದರೆ ಅದಕ್ಕೆ ಮತ್ತೊಂದು ಹೆಣ ಬೀಳಬೇಕಾ? 15 ಮಂದಿ ಬಹಳ ವ್ಯವಸ್ಥಿತವಾಗಿ ಈ ಹತ್ಯೆ ಮಾಡಿದ್ದಾರೆ. ಇದರ ವಿರುದ್ಧ ವಿಶೇಷ ತನಿಖಾ ತಂಡ ರಚಿಸಿ ತಕ್ಷಣ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.