ಪೊಲೀಸರ ಅನುಮತಿ ಇಲ್ಲದೇ ಬಜ್ಫೆ ಚಲೋ ಪ್ರತಿಭಟನೆ ನಡೆಸಿದ್ದ ಆಯೋಜಕರು, ಭಾಷಣಕಾರನ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.
ಮಂಗಳೂರು (ದಕ್ಷಿಣ ಕನ್ನಡ) : ಪೊಲೀಸರ ಅನುಮತಿ ಪಡೆಯದೇ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸುವಂತೆ ನಗರದ ಹೊರವಲಯದ ಬಜ್ಪೆ ಶಾರದಾ ಮಂಟಪದಲ್ಲಿ ಭಾನುವಾರ ಸಂಜೆ ನಡೆದಿದ್ದ ಜನಾಗ್ರಹ ಸಭೆ ಆಯೋಜಿಸಿದವರ ವಿರುದ್ಧ ಬಜ್ಪೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಬಜ್ಪೆಯ ಶಾರದ ಮಂಟಪದ ಬಳಿ ಬಜ್ಪೆ ಚಲೋ ಪ್ರತಿಭಟನಾ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಪೊಲೀಸರ ಅನುಮತಿ ಇರದಿದ್ದರೂ, ಮೂರು ಸಾವಿರ ಮಂದಿ ಜನ ಜಮಾಯಿಸಿದ್ದರು. ಕಾನೂನಿಗೆ ವಿರುದ್ಧವಾಗಿ ಬಜ್ಪೆ ಪೇಟೆಯಲ್ಲಿ ಜನ ಸೇರಿದ್ದರು. ಅದಕ್ಕಾಗಿ ಬಜ್ಪೆಯ ರಸ್ತೆಗಳನ್ನು ಮುಚ್ಚಲಾಗಿತ್ತು. ಇದರಿಂದ ಸಾರ್ವಜನಿಕರು ಹಾಗೂ ವಾಹನಗಳು ಸಂಚರಿಸಲಾಗದೇ, ಸರಿಯಾಗಿ ಬಸ್, ಆಟೋರಿಕ್ಷಾ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿತ್ತು
ಅಲ್ಲದೆ, ಪ್ರತಿಭಟನೆ ಸಂದರ್ಭದಲ್ಲಿ ಭಾಷಣಕಾರ ಶ್ರೀಕಾಂತ್ ಎಂಬಾತ ಪ್ರಚೋದನಾಕಾರಿ ಭಾಷಣ ಮಾಡಿದ್ದು, ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವ ಹೇಳಿಕೆ ನೀಡಿ ಜನರನ್ನು ಪ್ರಚೋದಿಸಿದ್ದನು. ಇದು ಕೋಮು ಸೌಹಾರ್ದ ಕದಡುವ ಯತ್ನವಾಗಿದ್ದು, ಪೊಲೀಸರು ಆಯೋಜಕರು ಮತ್ತು ಭಾಷಣಕಾರನ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಎನ್ಎಸ್ ಸೆಕ್ಷನ್ 189(2), 191(2), 285, 192, 351(2), 351(3), 190 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 107 ಮತ್ತು 109 ಪ್ರಕಾರ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.