
ತಾಳಿ ಕಟ್ಟುವ ವೇಳೆ ವಧು ತಲೆ ಅಲ್ಲಾಡಿಸಿ ನನಗೆ ಮದುವೆ ಬೇಡ ಎಂದ ಘಟನೆ ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ತಾಳಿ ಕಟ್ಟೋ ಮುಹೂರ್ತಕ್ಕೂ ಮುನ್ನ ಯುವತಿಗೆ ಒಂದು ಫೋನ್ ಕರೆ ಬಂದಿದೆ. ಆಗ ವಧು ತಕ್ಷಣವೇ ನನಗೆ ಈ ಮದುವೆ ಬೇಡ ಎಂದು ವಧು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೆತ್ತವರು, ಸಂಬಂಧಿಕರು ಯಾರು ಏನೇ ಹೇಳಿದರು ಕೇಳದ ವಧು ರೂಂಗೆ ಹೋಗಿ ಮದುವೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದಾರೆ.
ವಧು ಮದುವೆ ಬೇಡ ಎಂದಾಗ ಕೈಯಲ್ಲಿ ತಾಳಿ ಹಿಡಿದಿದ್ದ ವರ ಯಾಕೆ ಮದುವೆ ಬೇಡ ಎಂದು ಕೇಳಿದ್ದಾನೆ. ಕೊನೆಗೆ ಹಠ ಹಿಡಿದ ಬೆನ್ನಲ್ಲೇ ವರ ಕೂಡ ನನಗೂ ಮದುವೆ ಬೇಡ ಎನ್ನುತ್ತಾ ಕಣ್ಣೀರು ಹಾಕಿದ್ದಾನೆ. ಮಗಳು ಮದುವೆ ಬೇಡ ಎಂದಿದ್ದಕ್ಕೆ ಪೋಷಕರು ಸಹ ಕಣ್ಣೀರಿಟ್ಟಿದ್ದಾರೆ.

ಕಲ್ಯಾಣ ಮಂಟಪದಲ್ಲಿ ಮದುವೆ ನೋಡಲು ಬಂದಿದ್ದ ನೂರಾರು ಸಂಬಂಧಿಕರು ಹುಡುಗಿಯ ಮಾತಿಗೆ ಶಾಕ್ ಆಗಿದ್ದಾರೆ. ಮದುವೆ ಮುರಿದುಬಿದ್ದ ಬಗ್ಗೆ ಸಂಬಂಧಿಕರು ಮಾತನಾಡಿದ್ದಾರೆ. ಅಸಲಿಗೆ ಮದುವೆ ಯಾಕೆ ಮರಿದು ಬಿದ್ದಿದೆ ಅನ್ನೋ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
ತಾಳಿ ತರಬೇಕಾದ್ರೆ ವಧು ತಲೆ ಅಲ್ಲಾಡಿಸಿದಳು. ನಾನು ಮದುವೆ ಆಗಲ್ಲ ಎಂದ ಹುಡುಗಿ ತಲೆ ಅಲ್ಲಾಡಿಸಿ ಬಿಟ್ಟರು. ಆಗ ಪಾಪ ಮದುಮಗ ಮದುವೆ ಆಗ್ತಿಯಾ ಎಂದು ಕೇಳಿದ. ಮದುಮಗ ತುಂಬಾ ಒಳ್ಳೆಯ ಹುಡುಗ. ಸರ್ಕಾರಿ ಶಾಲೆಯ ಶಿಕ್ಷಕನಾಗಿರುವ ಹುಡುಗ ಕೂಡ ಕಣ್ಣೀರು ಹಾಕಿದ. ಮದುವೆ ಹುಡುಗಿ ಹೀಗೆ ಮಾಡಬಾರದಿತ್ತು.
ಮದುವೆಗೆ ಮಾಡಿದ್ದ ಖರ್ಚು ಎಲ್ಲಾ ವ್ಯರ್ಥವಾಯಿತು. ಎಲ್ಲಾ ಮುಗಿದು ತಾಳಿ ಕಟ್ಟುವ ಸಮಯದಲ್ಲಿ ಹುಡುಗಿ ಒಪ್ಪಲಿಲ್ಲ. ಹುಡುಗಿ ಮನೆಯವರು ಕಾಲಿಗೆ ಬಿದ್ದು ಕೇಳಿದ್ರು ಮದುವೆ ಆಗಲು ಹುಡುಗಿ ಒಪ್ಪಲಿಲ್ಲ. ತಾಳಿ ಕಟ್ಟಲು ತಂದಾಗಲೇ ಹುಡುಗಿ ಮತ್ತೊಬ್ಬ ಹುಡುಗನನ್ನು ಪ್ರೀತಿಸುವ ವಿಚಾರ ತಂದೆ, ತಾಯಿಗೆ ಗೊತ್ತಾಗಿದೆ. ಹುಡುಗಿ ಮನೆಯವರು ಈಗ ಕಣ್ಣೀರು ಹಾಕುತ್ತಿದ್ದಾರೆ.

ಕಲ್ಯಾಣ ಮಂಟಪಕ್ಕೆ ಭೇಟಿ ಕೊಟ್ಟ ಹಾಸನ ಪೊಲೀಸರು ಹುಡುಗ, ಹುಡುಗಿ ಹಾಗೂ ಸಂಬಂಧಿಕರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಮುರಿದು ಬಿದ್ದ ಮದುವೆ ಬಗ್ಗೆ ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.