ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಯಣಸ್ವಾಮಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಬುಧವಾರ ಕೆರಳಸುವಂತೆ ಮಾಡತ್ತು. ಛಲವಾದಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ದಿನಿವಿಡೀ ಪ್ರತಿಭಟನೆ ನಡೆಸಿದ್ದರು. ಕೊನೆಗೆ ಛಲವಾದಿ ತಾವಾಡಿದ ಮಾತಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಏನಿದು ವಿವಾದ ಎಂಬ ವಿವರ ಇಲ್ಲಿದೆ.
ಕಲಬುರಗಿ, ಮೇ 22: ಕಲಬುರಗಿ ಪ್ರವಾಸದಲ್ಲಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಯಣಸ್ವಾಮಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಆಡಿದ ಅವಹೇಳನಕಾರಿ ಮಾತು ತೀವ್ರ ವಿರೋಧಕ್ಕೆ ಗುರಿಯಾಯಿತು. ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ ಯಶ್ವಸಿಯಾದ ಬಗ್ಗೆ ಬಿಜೆಪಿ ಎಲ್ಲಾ ಕಡೆ ತಿರಂಗಾ ಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದಕ್ಕಾಗಿ ನಾರಯಣಸ್ವಾಮಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದಲ್ಲಿ ಯಾತ್ರೆಯಲ್ಲ ಭಾಗವಹಿಸಲು ಬಂದಿದ್ದರು. ಅದಕ್ಕೂ ಮೊದಲು ಬೆಳಗ್ಗೆ ಕಲಬುರಗಿ ನಗರದಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು. ಈ ವೇಳೆ, ಪ್ರಧಾನಿ ಮೋದಿಯನ್ನು ಪ್ರಶ್ನಿಸುವ ಸಚಿವ ಪ್ರಿಯಾಂಕ್ ಖರ್ಗೆ ಮೊದಲು ತಮ್ಮ ತಂದೆಯನ್ನು ಪ್ರಶ್ನಿಸಲಿ ಎಂದಿದ್ದಾರೆ. ಅಷ್ಟಕ್ಕೇ ಸುಮ್ಮನಾಗದೆ, ‘‘ಆನೆ ನಡೆಯುವಾಗ ನಾಯಿ ಬೊಗುಳುತ್ತದೆ. ಹಾಗೆಯೇ ಪ್ರಧಾನಿ ದೇಶದ ಪರವಾಗಿ ಇರುವಾಗ ಪ್ರಿಯಾಂಕ್ ನಾಯಿತರ ಬೋಗಳುತ್ತಾರೆ’’ ಎಂದು ಬಿಟ್ಟಿದ್ದರು.
ಛಲವಾದಿ ಅವರ ಈ ಹೇಳಿಕೆ ಕಲಬುರಗಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ರಾಜಕೀಯವಾಗಿ ನಮ್ಮನಾಯಕರನ್ನು ನೀವು ಏನೇ ಟೀಕೆ ಮಾಡಿದರೂ ಸಹಿಸಿಕೊಳ್ಳುತ್ತೇವೆ. ಆದರೆ, ವೈಯಕ್ತಿಕವಾಗಿ ನಾರಯಣಸ್ವಾಮಿ ಬೈಯ್ದಿದ್ದಾರೆ. ಅದಕ್ಕಾಗಿ ಅವರು ಕ್ಷಮೆ ಕೇಳಲೇಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದರು. ನಾರಯಣಸ್ವಾಮಿ ಚಿತ್ತಾಪುರದ ಪ್ರವಾಸಿ ಮಂದಿರಕ್ಕೆ ಆಗಮಿಸುತ್ತಿದ್ದಂತೆಯೇ ಗೇಟ್ ಮುಂದೆ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಛಲುವಾದಿ ನಾರಯಣಸ್ವಾಮಿ ಕ್ಷಮೆ ಕೇಳಲೆಬೇಕು, ಅಲ್ಲಿಯವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.
ಸಂಜೆ ನಾಲ್ಕು ಗಂಟೆಗೆ ಹೊತ್ತಿಗೆ ಚಿತ್ತಾಪುರ ಪ್ರವಾಸಿ ಮಂದಿರಕ್ಕೆ ಆಗಮಿಸುತ್ತಿದ್ದಂತೆಯೇ, ಕೈ ಕಾರ್ಯಕರ್ತರು ಘೇರಾವ್ ಹಾಕಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ನೀಡಿರುವ ಹೇಳಿಕೆಗೆ ಕ್ಷೆಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಸಂಜೆ ತಿರಂಗಾಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಳಲು ಬಿಡದಂತೆ ಘೇರಾವ್ ಹಾಕಿದ್ದಾರೆ. ಸುಮಾರು ನಾಲ್ಕೈದು ಗಂಟೆಗಳ ಕಾಲ ಕೈಕಾರ್ಯಕರ್ತರು ಐಬಿ ಗೇಟ್ ಮುಂದೆಯೇ ಪ್ರತಿಭಟನೆ ಮಾಡಿದ ಕಾರಣ ಛಲವಾದಿ ನಾರಯಣಸ್ವಾಮಿ ಸ್ವಾಮಿ ಪ್ರವಾಸಿ ಮಂದಿರದ ಒಳಗಡೆಯೇ ಕಾಲ ಕಳೆಯುವಂತಾಯಿತು. ಅಷ್ಟರಲ್ಲಿ ಈ ವಿಷಯ ರಾಜ್ಯ ಬಿಜೆಪಿ ಹಿರಿಯ ನಾಯಕರ ಗಮನಕ್ಕೂ ಬಂದಿತ್ತು.
ಹೇಡಿಯ ಕೊನೆಯ ಅಸ್ತ್ರವೇ ವೈಯಕ್ತಿಕ ನಿಂದನೆ: ಪ್ರಿಯಾಂಕ್
ತಮ್ಮ ವಿರುದ್ಧದ ಹೇಳಿಕೆಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರ ಈ ಎಲ್ಲಾ ನಿಂದನೆಗಳು ನನ್ನ ವಿರುದ್ಧ ಅವರಿಗಿರುವ ಅಪರಿಮಿತ ಅಸಹನೆಯನ್ನು ತೋರಿಸುತ್ತದೆ. ಹೇಡಿಯ ಕೊನೆಯ ಅಸ್ತ್ರವೇ ಅಪಪ್ರಚಾರ ಮತ್ತು ವೈಯಕ್ತಿಕ ನಿಂದನೆ ಎನ್ನುವ ನಾಣ್ಣುಡಿಗೆ ಬಿಜೆಪಿಯವರೇ ಉದಾಹರಣೆಯಾಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ ಸೂಚನೆ ಮೇರೆಗೆ ಛಲವಾದಿ ವಿಷಾದ
ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ನಾರಯಣಸ್ವಾಮಿಗೆ ಪೋನ್ ಮಾಡಿ, ಹೇಳಿಕೆಯಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಆ ರೀತಿ ಉಲ್ಲೇಖಿಸಬಾರದಿತ್ತು ಎಂದಿದ್ದಾರೆ. ಹೀಗಾಗಿ ತಮ್ಮ ಹೇಳಿಕೆಯಿಂದ ಸಚಿವ ಪ್ರಿಯಾಂಕ್ ಖರ್ಗೆಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಛಲವಾದಿ ಹೇಳಿದ್ದಾರೆ. ಪ್ರವಾಸಿ ಮಂದಿರದ ಒಳಗಡೆಯಿಂದಲೇ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕೊನೆಗ ನಾಲ್ಕೈದು ಗಂಟೆಗಳ ಬಳಿಕ ಪ್ರವಾಸಿ ಮಂದಿರದಿಂದ ಯಾದಗಿರಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಒಟ್ಟಿನಲ್ಲಿ ಬೆಳಿಗ್ಗೆಯಿಂದ ಛಲವಾದಿ ನಾರಯಣಸ್ವಾಮಿ ಆಡಿದ ಅದೊಂದು ಮಾತು ಹಲ್ ಚಲ್ ಸೃಷ್ಟಿಸಿತ್ತು.ಕೊನೆಗೆ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರಿಂದ ಪರಿಸ್ಥಿತಿ ತಿಳಿಯಾಯಿತು.