ಧರ್ಮಸ್ಥಳದ ಆಕಾಂಕ್ಷ ಪಂಜಾಬ್ನಲ್ಲಿ ನಿಗೂಢ ಸಾವು ಕೇಸ್ ಸದ್ಯ ಕಗ್ಗಂಟಾಗಿದೆ. ಕಾಲೇಜಿನಲ್ಲಿ ಈ ಹಿಂದೆ ಇಂತಹ ಘಟನೆಗಳು ನಡೆದಿರುವುದರಿಂದ ಕಾಲೇಜಿನ ಮೇಲೆ ಅನುಮಾನ ವ್ಯಕ್ತವಾಗಿದ್ದು, ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಆಕಾಂಕ್ಷ ಪೋಷಕರು ಪಂಜಾಬ್ ಸಿಎಂ ಭಗವಂತ್ ಮಾನ್ಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.
ಮಂಗಳೂರು, ಮೇ 19: ಪಂಜಾಬ್ನಲ್ಲಿ ಧರ್ಮಸ್ಥಳ ದ ಆಕಾಂಕ್ಷ ನಿಗೂಢ ಸಾವು ಕೇಸ್ಗೆ ಸಂಬಂಧಿಸಿದಂತೆ ಪ್ರೇಮ ವೈಫಲ್ಯದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಈಗಾಗಲೇ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಆಕಾಂಕ್ಷ ಸಾವಿನಲ್ಲಿ ಕಾಲೇಜಿನ ಮೇಲೆ ಸಾಕಷ್ಟು ಅನುಮಾನಗಳು ಮೂಡಿವೆ. ಈ ಹಿನ್ನೆಲೆ ಪಂಜಾಬ್ ಸಿಎಂ ಭಗವಂತ್ ಮಾನ್ಗೆ (Bhagwant Mann) ಮೃತಾ ಆಕಾಂಕ್ಷ ಪೋಷಕರು ಪತ್ರ ಬರೆದಿದ್ದು, ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿದ್ದಾರೆ.
ಈ ಹಿಂದೆ ಎಲ್ಪಿಸಿ ಕ್ಯಾಂಪಸ್ನಲ್ಲಿ ಇದೇ ರೀತಿ ಹಲವು ಅಸಹಜ ಸಾವುಗಳಾಗಿವೆ. ಇದರಲ್ಲಿ ಕಾಲೇಜಿನ ಕೈವಾಡ ಹೆಚ್ಚಾಗಿ ಕಂಡು ಬರುತ್ತಿದೆ. ಸರಿಯಾದ ತನಿಖೆ ನಡೆದರೆ ಮಾತ್ರ ಸತ್ಯ ಹೊರಬರುತ್ತದೆ. ಸರಿಯಾಗಿ ತನಿಖೆ ನಡೆಸುವಂತೆ ಪಂಜಾಬ್ ಸಿಎಂಗೆ ಪತ್ರ ಬರೆದಿದ್ದಾರೆ.
ಪ್ರಕರಣ ತಿರುಚಲು ಯತ್ನ: ಕಾಲೇಜು ಮತ್ತು ಪೊಲೀಸ್ ಇಲಾಖೆ ವಿರುದ್ಧ ಆರೋಪ
ಇನ್ನು ಪ್ರಕರಣ ತಿರುಚಲು ಯತ್ನಿಸುತ್ತಿದ್ದಾರೆ ಎಂದು ಆಕಾಂಕ್ಷ ಪೋಷಕರು ಕಾಲೇಜು ಮತ್ತು ಪೊಲೀಸ್ ಇಲಾಖೆ ವಿರುದ್ಧ ಆರೋಪ ಮಾಡಿದ್ದಾರೆ. ಇನ್ನು ಕೂಡ ಎಫ್ಐಆರ್ ದಾಖಲಾಗಿಲ್ಲ. ಎಫ್ಐಆರ್ ದಾಖಲಾಗದಿರುವುದರಿಂದ ಮರಣೋತ್ತರ ಪರೀಕ್ಷೆ ಕೂಡ ಆಗಿಲ್ಲ.
ಕಾಲೇಜಿನವರು ನೀಡಿದ ಮಾಹಿತಿ ಆಧಾರದಲ್ಲಿ ಎಫ್ಐಆರ್ ಮಾಡಲು ಬಿಡಲ್ಲವೆಂದು ಪೋಷಕರು ಪಟ್ಟು ಹಿಡಿದಿದ್ದು, ಇತ್ತ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರೊಫೆಸರ್ ವಿರುದ್ಧ ಎಫ್ಐಆರ್ ಹಾಕಲು ಪೊಲೀಸರು ಹಿಂದೇಟು ಆರೋಪ ಕೇಳಿಬಂದಿದೆ. ಇದರಿಂದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆಕಾಂಕ್ಷ ಪೋಷಕರು ದೂರು ನೀಡಿದ್ದಾರೆ.
ಆಕಾಂಕ್ಷ ಪೋಷಕರನ್ನು ಭೇಟಿ ಮಾಡಿದ ಹಿರಿಯ ಪೊಲೀಸ್ ಅಧಿಕಾರಿಗಳು
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಆಕಾಂಕ್ಷ ಪೋಷಕರನ್ನು ಜಲಂಧರ್ನ ಡಿಐಜಿ ನವೀನ್ ಸಿಂಗ್ಲಾ ಮತ್ತು ಎಸ್ಪಿ ರೂರೇಂಧರ್ ಭಾಟ್ಟಿ ಕೌರ್ ಭೇಟಿ ಮಾಡಿದ್ದಾರೆ. ಈ ವೇಳೆ ಘಟನೆಯನ್ನು ವಿವರಿಸಿ ಪೋಷಕರ ಅಹವಾಲು ಸ್ವೀಕರಿಸಿದ್ದಾರೆ. ಕಾಲೇಜಿನ ವಿರುದ್ಧ ಪ್ರಕರಣ ದಾಖಲಿಸುವಂತೆ ಪೋಷಕರು ಆಗ್ರಹಿಸಿದ್ದಾರೆ. ಆದರೆ ಆ ರೀತಿ ಮಾಡಲು ಆಗಲ್ಲ ಅಂತಾ ಪೊಲೀಸರು ಹೇಳಿದ್ದಾರೆ. ಹಾಗಾಗಿ ಆಕಾಂಕ್ಷ ಸಾವು ಪ್ರಕರಣ ಇನ್ನು ಕೂಡ ಕಗ್ಗಂಟಾಗಿದೆ.
22 ವರ್ಷದ ಆಕಾಂಕ್ಷ ಪಂಜಾಬ್ನ ಪಗ್ವಾರದಲ್ಲಿರುವ ಲವ್ಲಿ ಪ್ರೊಫೆಷನಲ್ ಕಾಲೇಜ್ನಲ್ಲಿ ಏರೋನಾಟಿಕ್ ಇಂಜಿನಿಯರಿಂಗ್ ಮುಗಿಸಿದ್ದಳು. 6 ತಿಂಗಳಿಂದ ದೆಹಲಿಯ ಸ್ಪೈಸ್ ಜೆಟ್ ಏರೋಸ್ಪೇಸ್ನಲ್ಲಿ ಕೆಲಸ ಮಾಡುತ್ತಿದ್ದಳು. ಹೆಚ್ಚುವರಿ ಕೋರ್ಸ್ಗಾಗಿ ಜರ್ಮನಿಗೆ ತೆರಳೋದಕ್ಕಾಗಿ ಸಜ್ಜಾಗಿದ್ದಳು. ಅಷ್ಟರಲ್ಲಿ ದುರಂತ ಸಂಭವಿಸಿದೆ.