ಸಂತಿ ಬಸ್ತವಾಡದಲ್ಲಿ ಕುರ್ ಆನ್ ಗೆ ಬೆಂಕಿ ಹಚ್ಚಿದ ಘಟನೆಯನ್ನು ಖಂಡಿಸಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದರು. ಶಾಸಕ ಆಸೀಫ್ ಸೇಠ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ಪೆಕ್ಟರ್ ಅಮಾನತುಗೊಂಡಿದ್ದಾರೆ.
ಬೆಳಗಾವಿ, ಮೇ 16: ಸಂತಿ ಬಸ್ತವಾಡ ಗ್ರಾಮದಲ್ಲಿ ಕುರಾನ್ಗೆ (Quran) ಬೆಂಕಿ ಹಚ್ಚಿದ್ದನ್ನು ಖಂಡಿಸಿ ಮುಸ್ಲಿಮರು (Muslims) ಶುಕ್ರವಾರ (ಮೇ.16) ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ತ್ರಿವರ್ಣ ಧ್ವಜ ಹಿಡಿದು, ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ‘ಕುರಾನ್ ರಕ್ಷಣೆ ನಮ್ಮೆಲ್ಲರ ಕರ್ತವ್ಯ’ ಎಂಬ ಭಿತ್ತಿಪತ್ರ ಪ್ರದರ್ಶಿಸಿದರು. ಪವಿತ್ರ ಕುರಾನ್ ಸುಟ್ಟಿರುವ ಆರೋಪಿಗೆ ಗಲ್ಲಿಗೇರಿಸುವಂತೆ ಪಟ್ಟು ಒತ್ತಾಯಿಸಿದರು.
ಕುರಾನ್ ಸುಟ್ಟವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕ ಆಸೀಫ್ ಸೇಠ್ ಮತ್ತು ಇತರ ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಆಸೀಫ್ ಸೇಠ್, “ಮೂರು ದಿನದ ಹಿಂದೆ ಸಂತಿ ಬಸ್ತವಾಡದಲ್ಲಿ ಕೆಟ್ಟ ಘಟನೆ ಆಗಿದೆ. ಕ್ರಿಮಿನಲ್ಗಳು ಕುರಾನ್ ಸುಟ್ಟು ಹಾಕಿದ್ದಾರೆ. ಕೆಟ್ಟ ಘಟನೆನ್ನು ಯಾರಿಂದಲೂ ಸಹಿಸಲು ಆಗಲ್ಲ. ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೆವೆ ಅಂತ ಜಿಲ್ಲಾಧಿಕಾರಿಗಳು ಹೇಳಿದ್ದಾರೆ ಎಂದು ತಿಳಿಸಿದರು.
ಯಾರೂ ಆರೋಪಿಗಳಿದ್ದಾರೋ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಿ. ಸಂತಿ ಬಸ್ತವಾಡದ ಹಿಂದೂ ಬಾಂಧವರೂ ಸಹ ಕ್ರಮಕೈಗೊಳ್ಳಿ. ಏಳು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುತ್ತೇವೆ ಅಂತ ಹೇಳಿದ್ದಾರೆ. ಈ ಘಟನೆಯಿಂದ ಎಲ್ಲರಿಗೂ ನೋವಾಗಿದೆ. ಈದ್ಗಾ ಧ್ವಂಸ ಮಾಡಿದವರನ್ನು ಈಗಾಗಲೇ ಬಂಧಿಸಿದ್ದಾರೆ. ಪೂರ್ಣ ಪ್ರಮಾಣದ ತನಿಖೆ ಆಗುತ್ತದೆ” ಎಂದು ಹೇಳಿದರು.
ನಿರ್ಲಕ್ಷ್ಯ ತೋರಿದ ಇನ್ಸ್ಪೆಕ್ಟರ್ ಕೂಡ ಅಮಾನತು ಆಗಿದ್ದಾರೆ. ಪೊಲೀಸರು ಒಂದು ವಾರ ಸಮಯ ಕೇಳಿದ್ದಾರೆ. ಪೊಲೀಸರಿಗೆ ಸಮಯ ಕೊಡೋಣ. ಒಂದು ವೇಳೆ ವಾರದೊಳಗೆ ಆರೋಪಿಗಳ ಬಂಧನ ಆಗದಿದ್ದರೆ ಸಮಾಜದ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ” ಎಂದರು.