
ಮೇ 1 ರಂದು, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ನಂತರ ಮಂಗಳೂರಿನಲ್ಲಿ ನಡೆದಿದ್ದಮೂರು ಚಾಕು ಇರಿತ ಪ್ರಕರಣಗಳು ನಡೆದಿದ್ದವು. ಹೀಗಾಗಿ ಸುಹಾಸ್ ಹತ್ಯೆ ಪ್ರತೀಕಾರಕ್ಕೆ ಈ ದಾಳಿಗಳು ನಡೆದಿವೆ ಎನ್ನುವ ಚರ್ಚೆಗಳು ನಡೆದಿವೆ. ಇದರ ಮಧ್ಯೆ ಇದೀಗ ಮಂಗಳೂರು ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ. ಹಾಗಾದ್ರೆ, ಮಂಗಳೂರಿನಲ್ಲಿ ಯಾವ್ಯಾವ ಪ್ರದೇಶಗಳಲ್ಲಿ ಚಾಕು ಇರಿತಗಳು ಆಗಿದ್ದವು ಎನ್ನುವ ವಿವರ ಇಲ್ಲಿದೆ
ಮಂಗಳೂರು, (ಮೇ 03): ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ (Suhas Shetty Murder Case) ಸಂಬಂಧ ಪೊಲೀಸರು ಈಗಾಗಲೇ 8 ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಸುಹಾಸ್ ಹತ್ಯೆ ದಿನವೇ ಮಂಗಳೂರಿನ ಮೂರು ಕಡೆಗಳಲ್ಲಿ ಮೂವರು ಮುಸ್ಲಿಂ (Muslim) ಯುವಕರ ಮೇಲೆ ಚಾಕುವಿನಿಂದ ಹಲ್ಲೆಗಳು ನಡೆದಿದ್ದವು. ಅಡ್ಯಾರ್, ಕೊಂಚಾಡಿ ಮತ್ತು ತೊಕ್ಕೊಟ್ಟುಗಳಲ್ಲಿ ಈ ಘಟನೆಗಳು ನಡೆದಿದ್ದು, ಈ ಸಂಬಂಧ ಇಂದು (ಮೇ 07) ಮಂಗಳೂರು ಪೊಲೀಸರು (Mangaluru Police) ಏಳು ಜನರನ್ನು ಅರೆಸ್ಟ್ ಮಾಡಿದ್ದಾರೆ. ಕಣ್ಣೂರಿನಲ್ಲಿ ನೌಷಾದ್ ಮೇಲೆ ದಾಳಿ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನವಾಗಿದ್ದರೆ, ಕೊಂಚಾಡಿ ಲುಕ್ಮನ್ಗೆ ಚಾಕು ಇರಿತ ಕೇಸ್ನಲ್ಲಿ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಕಣ್ಣೂರು ಎಂಬಲ್ಲಿ ನೌಷಾದ್ ಎಂಬವರಿಗೆ ಚೂರಿ ಇರಿತ ಪ್ರಕರಣದಲ್ಲಿ ಮೂವರನ್ನು ಅರೆಸ್ಟ್ ಮಾಡಲಾಗಿದೆ. ಮುಡಿಪು ನಿವಾಸಿ ಲೋಹಿತಾಶ್ವ(32), ವೀರನಗರ ನಿವಾಸಿ ಪುನಿತ್ (28), ಕುತ್ತಾರ್ ನಿವಾಸಿ ಗಣೇಶ್ ಪ್ರಸಾದ್ (23) ಬಂಧಿತ ಆರೋಪಿಗಳು.
ಇನ್ನು ಕೊಂಚಾಡಿ ಎಂಬಲ್ಲಿ ಲುಕ್ಮನ್ ಎಂಬವರಿಗೆ ಚೂರಿ ಇರಿತ ಕೇಸ್ನಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಜಪೆ ನಿವಾಸಿ ಲಿಖಿತ್ (29), ಕುತ್ತಾರ್ ನಿವಾಸಿ ರಾಕೇಶ್(34), ಸುರತ್ಕಲ್ ನಿವಾಸಿ ಧನರಾಜ್ (24), ಮೂಡಬಿದ್ರೆಯ ಪ್ರಶಾಂತ್ ಶೆಟ್ಟಿ (26) ಬಂಧಿತರು

ಪ್ರಕರಣ 1: ನೌಷಾದ್ ಅವರು ತೊಕ್ಕೊಟ್ಟು ಸಮೀಪದ ಕಲ್ಲಾಪು ಮಾರ್ಕೆಟ್‌ಗೆ ಹೋಗಲು ನಸುಕಿನ 3 ಗಂಟೆಗೆ ಅಡ್ಯಾರ್ ಹೆದ್ದಾರಿಯಲ್ಲಿ ನಿಂತಿದ್ದ ವೇಳೆ ಎರಡು ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ಚೂರಿಯಿಂದ ಇರಿದು ಪರಾರಿಯಾಗಿದ್ದರು. ಚೂರಿ ಇರಿತವಾದ ತಕ್ಷಣ ದುಷ್ಕರ್ಮಿಗಳಿಂದ ನೌಷಾದ್ ತಪ್ಪಿಸಿಕೊಂಡು ಓಡಿ ಹೋಗಿದ್ದ. ಬಳಿಕ ಸ್ಥಳೀಯರು ಆಗಮಿಸಿ ನೌಷಾದ್‌ರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಈ ಸಂಬಂಧ ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ 2: ಇನ್ನೊಂದು ಘಟನೆ ತೊಕ್ಕೊಟ್ಟಿನ ಮಾಯಾ ಬಾರ್ ಬಳಿ ಗುರುವಾರ ಮಧ್ಯರಾತ್ರಿ 12.30ರ ಸುಮಾರಿಗೆ ನಡೆದಿತ್ತು. ಅಳೇಕಲ ನಿವಾಸಿ ಫೈಝಲ್ ಮೇಲೆ ದಾಳಿಯಾಗಿತ್ತು. ಈತ ಮಧ್ಯರಾತ್ರಿ ಒಂಭತ್ತುಕೆರೆಯ ಪತ್ನಿ ಮನೆಯಿಂದ ಕಲ್ಲಾಪುವಿನ ಗ್ಲೋಬಲ್ ಮಾರುಕಟ್ಟೆಗೆ ತನ್ನ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು ತಲ್ವಾರು ಬೀಸಿದ್ದರು. ಮತ್ತೊಂದು ಬೈಕ್‌ನಲ್ಲಿ ಇಬ್ಬರು ಯುವಕರು ಯುಧಗಳಿಂದ ಬಂದಿದ್ದರು. ಬಳಿಕ ನಾಲ್ವರು ದುಷ್ಕರ್ಮಿಗಳು ಪರಾರಿಯಾಗಿದ್ದರು. ಈ ಸಂಬಂಧ ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಪ್ರಕರಣ 3: ಮತ್ತೊಂದು ಘಟನೆಯಲ್ಲಿ ನಗರದ ಕೊಂಚಾಡಿಯಲ್ಲಿ ಗ್ರಾಹಕರೊಬ್ಬರಿಗೆ ಮೀನು ಕೊಡಲು ಕಾಯುತ್ತಿದ್ದ ಉಳ್ಳಾಲ ನಿವಾಸಿ ಲುಕ್ಮಾನ್ ಎಂಬ ವ್ಯಾಪಾರಿ ಮೇಲೆ ದಾಳಿ ನಡೆದಿತ್ತು. ಕಪ್ಪು ಬಣ್ಣದ ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿತ್ತು. ಲುಕ್ಮಾನ್‌ರನ್ನು ಬಲವಂತವಾಗಿ ಕೆಳಗೆ ಬೀಳಿಸಿ, ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಲಾಗಿತ್ತು. ಇದನ್ನು ನೋಡಿದ್ದ ಹಿಂದೂ ಮಹಿಳೆಯೊಬ್ಬರು ಬೊಬ್ಬೆ ಹಾಕುತ್ತ ಸ್ಥಳಕ್ಕೆ ಧಾವಿಸಿದ್ದರು. ಇದರಿಂದ ದುಷ್ಕರ್ಮಿಗಳು ಆತಂತಕ್ಕೆ ಒಳಗಾಗಿ ಸ್ಥಳದಿಂದ ಪರಾರಿಯಾಗಿದ್ದರು. ಹೀಗಾಗಿ ಲುಕ್ಮಾನ್ ಪ್ರಾಣಾಪಾಯದಿಂದ ಪಾರಾಗಿದ್ದ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.