ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರ, ಬೆದರಿಕೆ ಮತ್ತು ದ್ವೇಷ ಕಾರುವ ಘಟನೆಗಳು ವರದಿಯಾಗಿವೆ. ಅನಂತ್‌ನಾಗ್ ಜಿಲ್ಲೆಯ ಬೈಸರನ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಇಪ್ಪತ್ತಾರು ಜನರು ಸಾವನ್ನಪ್ಪಿದ್ದು ಮತ್ತು 17 ಜನರು ಗಾಯಗೊಂಡಿದ್ದರು.
ದಾಳಿಯ ನಂತರ, ಉತ್ತರಾಖಂಡ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಮುಸ್ಲಿಮರ ಮೇಲೆ ಹಿಂಸಾಚಾರ, ಬೆದರಿಕೆ ಮತ್ತು ದ್ವೇಷ ಕಾರುವ ಘಟನೆಗಳು ವರದಿಯಾಗಿವೆ.
ಉತ್ತರಾಖಂಡದಲ್ಲಿ, ಏಪ್ರಿಲ್ 23 ರಂದು ಸ್ಥಳೀಯರು ಇಬ್ಬರು ವ್ಯಾಪಾರಿಗಳ ಮೇಲೆ ದಾಳಿ ಮಾಡಿದ್ದಾರೆ ಎಂಬ ಆರೋಪದ ನಂತರ ಕಾಶ್ಮೀರದ ಕನಿಷ್ಠ 16 ಶಾಲು ವ್ಯಾಪಾರಿಗಳು ಮಸ್ಸೂರಿಯನ್ನು ತೊರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಬುಧವಾರ ವರದಿ ಮಾಡಿದೆ. ದಾಳಿಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ದೀಪಮ್ ಸೇಥ್ ಹೇಳಿದ್ದಾರೆ.

ಹಲ್ಲೆಗೊಳಗಾದ ಮಾರಾಟಗಾರರಲ್ಲಿ ಒಬ್ಬರಾದ ಕುಪ್ವಾರದ ಶಬೀರ್ ಅಹ್ಮದ್ ದಾರ್ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿದ್ದು, ತಮ್ಮ ಸರಕುಗಳನ್ನು ಮಾರಾಟ ಮಾಡಲು 18 ವರ್ಷಗಳಿಂದ ಮಸ್ಸೂರಿಗೆ ಭೇಟಿ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ. ದಾಳಿಕೋರರು ಅದೇ ಪ್ರದೇಶದವರಾಗಿದ್ದು, ಅವರನ್ನು ತಾನು ಈ ಮೊದಲು ನೋಡಿದ್ದಾಗಿ ಹೇಳಿದ್ದಾರೆ. “ದಾಳಿಯ ವೇಳೆ ಯಾರೂ ನಮ್ಮ ಪರವಾಗಿ ನಿಲ್ಲಲಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರಿಗಳ ವಿರುದ್ಧ ಬೆದರಿಕೆ ಇದ್ದು, ಅವರು ಅಲ್ಲಿಂದ ಹೊರಡುವುದು ಉತ್ತಮ ಎಂದು ಪೊಲೀಸರು ಹೇಳಿದ್ದರು ಎಂದು ಅವರು ಹೇಳಿದ್ದಾರೆ. ಸೂರಜ್ ಸಿಂಗ್, ಪ್ರದೀಪ್ ಸಿಂಗ್ ಮತ್ತು ಅಭಿಷೇಕ್ ಉನಿಯಾಲ್ ಎಂದು ಗುರುತಿಸಲಾದ ಬಂಧಿತ ಮೂವರು ಬಿಜೆಪಿ ಪರ ದುಷ್ಕರ್ಮಿಗಳ ಸಂಘಟನೆಯಾದ ಬಜರಂಗದಳದ ಸದಸ್ಯರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಪೊಲೀಸ್ ಕಾಯ್ದೆಯ ಸೆಕ್ಷನ್ 81 ರ ಅಡಿಯಲ್ಲಿ ಅವರನ್ನು ಬಂಧಿಸಲಾಯಿತು ಮತ್ತು [ಅವ್ಯವಸ್ಥೆಯ ವರ್ತನೆಗೆ ಸಂಬಂಧಿಸಿದಂತೆ] ದಂಡ ವಿಧಿಸಿ ಬಿಡುಗಡೆ ಮಾಡಲಾಯಿತು. ಅವರು ಮಾಡಿದ ಅಪರಾಧಕ್ಕೆ ಕ್ಷಮೆಯಾಚಿಸಿದರು.” ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕ
ರಾಜ್ಯದ ಮಂಗಳೂರು ಜಿಲ್ಲೆಯಲ್ಲಿ, ಕ್ರಿಕೆಟ್ ಪಂದ್ಯದ ಸಮಯದಲ್ಲಿ ಮುಸ್ಲಿಂ ಎಂಬ ಕಾರಣಕ್ಕೆ ಕೇರಳ ಮೂಲದ ಅಶ್ರಫ್ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರನ್ನು ಹೊಡೆದು ಸಾಯಿಸಲಾಗಿದೆ. ಹತ್ಯೆಗೆ ಸಂಬಂಧಿಸಿದಂತೆ ಹದಿನೈದು ಜನರನ್ನು ಬಂಧಿಸಲಾಗಿದ್ದು, 25 ಕ್ಕೂ ಹೆಚ್ಚು ಶಂಕಿತರನ್ನು ಗುರುತಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಂಗಳವಾರ ತಿಳಿಸಿದ್ದಾರೆ. ಮಂಗಳೂರಿನ ಹೊರವಲಯದಲ್ಲಿರುವ ಕುಡುಪು ದೇವಸ್ಥಾನದ ಬಳಿ ಅವರ ಶವ ಪತ್ತೆಯಾಗಿತ್ತು. ಭಾನುವಾರ ಸಂಜೆ 5.30 ರ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶ
ಉತ್ತರ ಪ್ರದೇಶದ ಅಲಿಗಢದಲ್ಲಿ ಸೋಮವಾರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ರಸ್ತೆಯಲ್ಲಿ ಇರಿಸಲಾಗಿದ್ದ ಧ್ವಜವನ್ನು ಎತ್ತಿಕೊಂಡಿದ್ದಾರೆ ಎಂದು ಆರೋಪಿಸಿ 15 ವರ್ಷದ ಮುಸ್ಲಿಂ ವಿದ್ಯಾರ್ಥಿಯ ಮೇಲೆ ಗುಂಪೊಂದು ಹಲ್ಲೆ ನಡೆಸಿ ಪಾಕಿಸ್ತಾನ ಧ್ವಜದ ಮೇಲೆ ಮೂತ್ರ ವಿಸರ್ಜನೆ ಮಾಡಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಧ್ವಜದ ಕೆಳಗೆ “ಪಾಕಿಸ್ತಾನ ಮುರ್ದಾಬಾದ್” ಎಂದು ಬರೆಯಲಾಗಿತ್ತು. ಬಾಲಕ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಹುಡುಗನನ್ನು ಸುತ್ತುವರೆದು ದುಷ್ಕರ್ಮಿಗಳು ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸುತ್ತಿರುವುದು ದಾಖಲಾಗಿದೆ. ಶಾಲೆಯಿಂದ ವಾಪಾಸು ಬರುತ್ತಿದ್ದ ಬಾಲಕ ರಸ್ತೆಯ ಮಧ್ಯದಿಂದ ಧ್ವಜವನ್ನು ಎತ್ತಿಕೊಂಡಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.

ಅಲ್ಲದೆ, ಕಾಶ್ಮೀರಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಪ್ರದೇಶಕ್ಕೆ ಬರದಂತೆ ಬೆದರಿಸಲಾಗಿದ್ದು, ಈ ಬೆದರಿಕೆ ಸಂದೇಶಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಡಲಾಗಿದೆ. ಹಿಂದೂ ರಕ್ಷಾ ದಳ ದುಷ್ಕರ್ಮಿ ಲಲಿತ್ ಶರ್ಮಾ ಎಂಬಾತನು ಕಾಶ್ಮೀರಿ ಮುಸ್ಲಿಮರಿಗೆ ನಗರವನ್ನು ತೊರೆಯುವಂತೆ ಎಚ್ಚರಿಕೆ ನೀಡುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾನೆ ಎಂದು ದಿವೈರ್ ಹೇಳಿದೆ.
ಮಧ್ಯಪ್ರದೇಶ
ರಾಜ್ಯದ ಭೋಪಾಲ್‌ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಬೆಂಬಲಿಸಿದ್ದಾರೆ ಎಂದು ಆರೋಪಿಸಿ ದುಷ್ಕರ್ಮಿಯೊಬ್ಬ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್‌ಗೆ ಜೀವ ಬೆದರಿಕೆ ಬಂದಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಭೋಪಾಲ್ (ಕೇಂದ್ರ) ವಿಧಾನಸಭಾ ಸ್ಥಾನವನ್ನು ಪ್ರತಿನಿಧಿಸುವ ಮಸೂದ್ ಶಹಜನಾಬಾದ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ.
ದುಷ್ಕರ್ಮಿಯೊಬ್ಬರನ್ನು ಸಚಿನ್ ರಘುವಂಶಿ ಎಂದು ಗುರುತಿಸಲಾಗಿದ್ದು, ಆತ ಸಾಮಾಜಿಕ ಮಾಧ್ಯಮ ವೇದಿಕೆಯಾದ ಫೇಸ್‌ಬುಕ್‌ನಲ್ಲಿ “ನಾಳೆ ಆರಿಫ್ ಮಸೂದ್‌ನನ್ನು ಕೊಲ್ಲುತ್ತೇನೆ. ನನ್ನನ್ನು ಜೈಲಿನಿಂದ ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಪಹಲ್ಗಾಮ್‌ನಲ್ಲಿ ನಡೆದ ಹತ್ಯಾಕಾಂಡದ ನಂತರ, ಘಟನೆಯನ್ನು ಬೆಂಬಲಿಸುತ್ತಿರುವ ಒಬ್ಬ ದೇಶದ್ರೋಹಿ, ಒಬ್ಬ ವ್ಯಕ್ತಿಯನ್ನು ನಾನು ಕೊಲ್ಲುತ್ತೇನೆ.” ಎಂದು ಬರೆದಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
ಜಮ್ಮು ಕಾಶ್ಮೀರ
ದಿ ವೈರ್‌ನ ವರದಿಯು ದಾಳಿಯ ನಂತರ ಜಮ್ಮು, ಉತ್ತರಾಖಂಡ್, ಪಂಜಾಬ್, ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ನಿವಾಸಿಗಳು ಬೆದರಿಕೆ, ಕಿರುಕುಳ, ಮತ್ತು ಹಿಂಸಾಚಾರದ ಆರೋಪಗಳನ್ನು ಎದುರಿಸಿದ್ದಾರೆ ಎಂದು ಉಲ್ಲೇಖಿಸಿದೆ. ಜಮ್ಮುವಿನಲ್ಲಿ, ಕಾಶ್ಮೀರಿ ವಿದ್ಯಾರ್ಥಿಗಳು ತಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ “ಜೈ ಶ್ರೀ ರಾಮ್” ಘೋಷಣೆಗಳೊಂದಿಗೆ ಯುವಕರು ಬೈಕ್‌ಗಳಲ್ಲಿ ತಿರುಗಾಡುತ್ತಿದ್ದ ವಿಡಿಯೋವನ್ನು ವರದಿಮಾಡಿದ್ದಾರೆ. ಇದು ಭಯದ ವಾತಾವರಣವನ್ನು ಸೃಷ್ಟಿಸಿದ್ದು, ಒಂದು ವಿಡಿಯೋದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳನ್ನು ಹೊಡೆದು ಓಡಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಪಂಜಾಬ್
ಪಂಜಾಬ್‌ನಲ್ಲಿ, ಕಾಶ್ಮೀರಿ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಂದ ಕಿರುಕುಳವನ್ನು ಎದುರಿಸಿದ್ದಾರೆ ಎಂದು ದಿ ವೈರ್ ಉಲ್ಲೇಖಿಸಿದೆ. ಆದರೆ ಈ ಘಟನೆಗಳು ದೈಹಿಕ ಹಿಂಸಾಚಾರಕ್ಕೆ ತಿರುಗಿರುವ ಬಗ್ಗೆ ನಿರ್ದಿಷ್ಟ ವಿವರಗಳಿಲ್ಲ.
ಪ್ರತಿಭಟನೆಗಳು ಮತ್ತು ಧ್ವೇಷ ಭಾಷಣ:
ಪಹಲ್ಗಾಮ್ ದಾಳಿಯ ನಂತರ, ಬಿಜೆಪಿ ಸದಸ್ಯರು ಮತ್ತು ನಾಯಕರು ಧ್ವೇಷ ಭಾಷಣ ಮತ್ತು ಹಿಂಸಾಚಾರದ ಘಟನೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಈ ಘಟನೆಗಳಲ್ಲಿ ಆರ್ಥಿಕ ಬಹಿಷ್ಕಾರಕ್ಕೆ ಕರೆಗಳು, ಮಸೀದಿಗಳ ವಿರುದ್ಧ ಉದ್ವಿಗ್ನ ಪ್ರತಿಭಟನೆಗಳು, ಮುಸ್ಲಿಂ ವ್ಯಾಪಾರಿಗಳ ಮೇಲಿನ ದಾಳಿಗಳು ಸೇರಿವೆ. ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಂತಹ ದುಷ್ಕರ್ಮಿ ಸಂಟನೆಗಳು ಸಹ ಇದೇ ರೀತಿಯ ಧೋರಣೆಯನ್ನು ಒಳಗೊಂಡ ಪ್ರತಿಭಟನೆಗಳನ್ನು ಆಯೋಜಿಸಿವೆ.
ಇಂಡಿಯನ್ ಎಕ್ಸ್‌ಪ್ರೆಸ್, ದಿ ಹಿಂದೂ, ಇಂಡಿಯಾ ಟುಡೆ, ಎನ್‌ಡಿಟಿವಿ, ಸ್ಕ್ರಾಲ್, ದಿ ವೈರ್, ಮತ್ತು ಡೆಕ್ಕನ್ ಹೆರಾಲ್ಡ್‌ನ ವರದಿಗಳು ಪಹಲ್ಗಾಮ್ ದಾಳಿಯ ನಂತರ ಜಮ್ಮು, ಉತ್ತರಾಖಂಡ್, ಉತ್ತರ ಪ್ರದೇಶ, ಮತ್ತು ಪಂಜಾಬ್‌ನಂತಹ ರಾಜ್ಯಗಳಲ್ಲಿ ಕಾಶ್ಮೀರಿ ಮತ್ತು ಮುಸ್ಲಿಂ ಸಮುದಾಯಗಳ ವಿರುದ್ಧ ಕಿರುಕುಳ, ಬೆದರಿಕೆ, ಮತ್ತು ಧ್ವೇಷ ಭಾಷಣದ ಏರಿಕೆಯನ್ನು ದಾಖಲಿಸಿವೆ.