ಮಂಗಳೂರು : ನಗರ ಹೊರವಲಯದ ಕುಡುಪು ಸಮೀಪ ರವಿವಾರ ವ್ಯಕ್ತಿಯೊಬ್ಬರನ್ನು ಸುಮಾರು 30ಕ್ಕೂ ಅಧಿಕವಿದ್ದ ಗುಂಪು ಹಲ್ಲೆ ನಡೆಸಿ ಹತ್ಯೆಗೈದಿರುವುದು ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿ 15 ಮಂದಿ ಆರೋಪಿಗಳನ್ನು ಬಂದಿಸಲಾಗಿದೆ.ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಕುಡುಪು ಮತ್ತು ಸುತ್ತಮುತ್ತಲಿನ ಸಚಿನ್ ಟಿ., ದೇವದಾಸ್, ಮಂಜುನಾಥ್, ಸಾಯಿದೀಪ್, ನಿತೀಶ್ ಕಮಾರ್ ಯಾನೆ ಸಂತೋಷ್, ದೀಕ್ಷಿತ್ ಕುಮಾರ್, ಸಂದೀಪ್, ವಿವಿಯನ್ ಅಲ್ವಾರಿಸ್, ಶ್ರೀದತ್ತ, ರಾಹುಲ್, ಪ್ರದೀಪ್ ಕುಮಾರ್, ಮನೀಶ್ ಶೆಟ್ಟಿ, ಧನುಷ್, ದೀಕ್ಷಿತ್, ಕಿಶೋರ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಕುಡುಪು ಮೈದಾನದ ಸಮೀಪ ಬಂದಿದ್ದ ವಲಸೆ ಕಾರ್ಮಿಕನನ್ನು ಆತನ ಧರ್ಮದ ಗುರುತಿನ ಕಾರಣಕ್ಕೆ ಕಲ್ಲು, ದೊಣ್ಣೆ, ಬ್ಯಾಟುಗಳಿಂದ ಅಲ್ಲಿದ್ದ ಗುಂಪು ಹಲ್ಲೆ ನಡೆಸಿ ಕೊಂದು ಹಾಕಿದೆ ಎಂದು ಎಲ್ಲೆಡೆ ಪುಕಾರು ಹಬ್ಬಿದೆ. ನತದೃಷ್ಟ ವಲಸೆ ಕಾರ್ಮಿಕ ದೇಶ ವಿರೋಧಿ ಘೋಷಣೆ ಕೂಗಿದ್ದಾನೆ ಎಂಬ ವದಂತಿಯನ್ನೂ ದುಷ್ಕರ್ಮಿಗಳ ಗುಂಪು ಹರಿಯಬಿಟ್ಟಿದೆ. ಆ ಮೂಲಕ ತಮ್ಮ ಗಂಭೀರ ದುಷ್ಕೃತ್ಯವನ್ನು ದೇಶ ಪ್ರೇಮದ ಲೇಬಲ್ ಅಂಟಿಸಿ ಸಮರ್ಥಿಸಿಕೊಳ್ಳುವ ಹೀನ ಯತ್ನವೂ ನಡೆಯುತ್ತಿದೆ ಎಂದು ಸ್ಥಳೀಯ ಹೋರಾಟಗಾರರು ಆರೋಪಿಸಿದ್ದಾರೆ.

ಮಂಗಳೂರು ನಗರದಲ್ಲಿ ಈ ರೀತಿ ಗುಂಪು ಹಲ್ಲೆ, ಹತ್ಯೆ ನಡೆಯುವುದು ಕರಾವಳಿ ಜಿಲ್ಲೆಗಳು ಅಪಾಯದ ಗಡಿದಾಟುತ್ತಿರುವುದರ ಸಂಕೇತ, ಪೆಹಲ್ಗಾಮ್ ದುರಂತದ ಬೆನ್ನಲ್ಲೆ ಈ ಘಟನೆ ನಡೆದಿರುವುದು ಆಘಾತಕಾರಿ ವಿದ್ಯಾಮಾನ. ವಲಸೆ ಕಾರ್ಮಿಕರು, ಅವರ ಧರ್ಮದ ಹಾಗೂ ವಿವಿಧ ಗುರುತಿನ ಕಾರಣಕ್ಕೆ ‘ದೇಶಪ್ರೇಮ’ದ ಲೇಬಲ್ ಅಡಿ ದುಷ್ಕರ್ಮಿಗಳು ಬಹಿರಂಗವಾಗಿ ಹೊಡೆದು ಹಾಕುವುದು ಅನಾಗರಿಕತೆಯ ಪರಮಾವಧಿ. ಇದರ ಸಾಮಾಜಿಕ ಪರಿಣಾಮಗಳು ಸರಿಪಡಿಸಲಾಗಷ್ಟು ಗಂಭೀರವಾಗಿರುತ್ತದೆ ಎಂದು ಸಿಪಿಐಎಂ ಸಿಪಿಐಎಂ ಘಟನೆಯನ್ನು ಖಂಡಿಸಿದೆ.
