– ಉಗ್ರರನ್ನು ಸದೆಬಡಿಯಲು ಕೇಂದ್ರ ಬೇಕಾದ್ದು ಮಾಡಲಿ ನಮ್ಮ ಬೆಂಬಲವಿದೆ; ರಾಗಾ
ಶ್ರೀನಗರ: ಪ್ರವಾಸಿಗರ ಮೇಲೆ ಉಗ್ರರ ದಾಳಿ ನಡೆಸಿದ ಮೂರು ದಿನಗಳ ಬಳಿಕ ಪಹಲ್ಗಾಮ್‌ಗೆ (Pahalgam) ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿ ನೀಡಿದ್ದಾರೆ. ಈ ವೇಳೆ ದಾಳಿಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿ, ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿ ದಾಳಿಯ ಕುರಿತ ವಿವರಗಳನ್ನು ಪಡೆದ್ದಾರೆ.

ಗಾಯಾಳುಗಳ ಭೇಟಿಯ ಬಳಿಕ ಮಾತನಾಡಿದ ಅವರು, ಉಗ್ರರ ಈ ದಾಳಿಯ ಹಿಂದಿನ ಉದ್ದೇಶ ಸಮಾಜವನ್ನು ವಿಭಜಿಸುವುದು. ಇದು ಒಂದು ಭಯಾನಕ ದುರಂತ. ದಾಳಿಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಹಾಗೂ ದಾಳಿಯ ಕುರಿತ ಮಾಹಿತಿ ಪಡೆಯಲು ಆಗಮಿಸಿದ್ದೇನೆ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಜನರು ಹಾಗೂ ಇಡೀ ರಾಷ್ಟ್ರವೇ ಈ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಮತ್ತು ಈ ಸಮಯದಲ್ಲಿ ರಾಷ್ಟ್ರವನ್ನು ಸಂಪೂರ್ಣವಾಗಿ ಬೆಂಬಲಿಸಿದೆ. ಗಾಯಗೊಂಡವರ ಆರೋಗ್ಯವನ್ನು ವಿಚಾರಿಸಿದ್ದೇನೆ. ಕುಟುಂಬ ಸದಸ್ಯರನ್ನು ಕಳೆದುಕೊಂಡ ಎಲ್ಲರಿಗೂ ನನ್ನ ಪ್ರೀತಿ, ವಾತ್ಸಲ್ಯವಿದೆ. ಇಡೀ ರಾಷ್ಟ್ರವು ಒಗ್ಗಟ್ಟಿನಿಂದ ನಿಂತಿದೆ. ನಾವು ಗುರುವಾರ ಸರ್ಕಾರದೊಂದಿಗೆ ಸಭೆ ನಡೆಸಿದ್ದೇವೆ. ಕಾಂಗ್ರೆಸ್ ಪಕ್ಷವು ಈ ದಾಳಿಯನ್ನು ಖಂಡಿಸಿದೆ ಎಂದರು.

ಉಗ್ರರ ವಿರುದ್ಧ ಸರ್ಕಾರ ಕೈಗೊಳ್ಳುವ ಎಲ್ಲಾ ನಿರ್ಧಾರಗಳಿಗೆ ನಮ್ಮ ಬೆಂಬಲವಿದೆ. ಸಮಾಜವನ್ನು ವಿಭಜಿಸುವುದೇ ಉಗ್ರರ ಈ ದಾಳಿಯ ಹಿಂದಿನ ಉದ್ದೇಶ. ಉಗ್ರರ ಈ ಪ್ಲ್ಯಾನ್ ವಿಫಲಗೊಳಿಸಲು ಪ್ರತಿಯೊಬ್ಬ ಭಾರತೀಯನೂ ಒಗ್ಗಟ್ಟಿನಿಂದಿರುವುದು ಬಹಳ ಮುಖ್ಯ ಎಂದು ಹೇಳಿದರು.