ಪಹಲ್ಗಾಮ್ ನಲ್ಲಿ 26 ಜನರನ್ನು ಬಲಿ ಪಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಭದ್ರತಾ ಪಡೆಗಳು ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.

ಜಮ್ಮುಕಾಶ್ಮೀರ: 26 ಜನರನ್ನು ಬಲಿ ಪಡೆದಿರುವ ಪಹಲ್ಗಾಮ್ ಉಗ್ರರ ದಾಳಿ ವಿರುದ್ಧ ಕಾರ್ಯಾಚರಣೆಗಿಳಿದಿರುವ ಭಾರತೀಯ ಸೇನೆ ಈಗ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ಬಾರಾಮುಲ್ಲಾದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ್ದಾರೆ. ಅಲ್ಲದೇ ಭಯೋತ್ಪಾದಕರ ಬಳಿ ಇದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಇತರ ಯುದ್ಧೋಚಿತ ದಾಸ್ತಾನುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

ಈ ದಾಳಿ ಹಿನ್ನೆಲೆ ತಮ್ಮ 2 ದಿನಗಳ ಮಹತ್ವದ ಸೌದಿ ಅರೇಬಿಯಾ ಪ್ರವಾಸವನ್ನು ಮೊಟುಕುಗೊಳಿಸಿ ಭಾರತಕ್ಕೆ ಮರಳಿರುವ ಪ್ರಧಾನಿ ಮೋದಿ ಈಗ ವಿದೇಶಾಂಗ ಕಾರ್ಯದರ್ಶಿ ಡಾ. ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಇತರ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.

ಕಾರ್ಯಾಚರಣೆಗೆ ಇಳಿದ ಎಎಲ್‌ಹೆಚಚ್ ಧ್ರುವ ಹೆಲಿಕಾಪ್ಟರ್‌ಗಳು
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ನಡೆಯುತ್ತಿರುವ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಸೇನೆಯ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್‌ಗಳನ್ನು ಶ್ರೀನಗರ, ಜೆ & ಕೆ ಮತ್ತು ಪಕ್ಕದ ಪ್ರದೇಶಗಳಲ್ಲಿ ಹಾರಲು ಅನುಮತಿಸಲಾಗಿದೆ ಎಂದು ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗುಜರಾತ್‌ನ ಪೋರ್ ಬಂದರ್‌ನಲ್ಲಿ ಭಾರತೀಯ ಕರಾವಳಿ ಕಾವಲು ಅಧಿಕಾರಿಗಳಿದ್ದ ಧ್ರುವ ಹೆಲಿಕಾಫ್ಟರ್ ಅಪಘಾತದ ನಂತರ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್‌ಗಳನ್ನು ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಹಾರಾಟ ಸ್ಥಗಿತಗೊಳಿಸಲಾಗಿತ್ತು
