ಮಂಗಳೂರು, ಎ.2: ಮಸೀದಿ, ಮದ್ರಸ, ಖಬರಸ್ತಾನ ದೋಚಲು ಬಿಡದಿರೋಣ ಎಂಬ ಘೋಷಣೆ ಯೊಂದಿಗೆ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಬುಧವಾರ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಲೋಕಸಭೆಯಲ್ಲಿ ವಕ್ಫ್ ಮಸೂದೆ ತಂದರೂ ಈ ದೇಶದ ಮುಸ್ಲಿಮರು ಒಪ್ಪಲು ಖಂಡಿತ ಸಾಧ್ಯವಿಲ್ಲ. ಮಾರಕ ಮಸೂದೆಯನ್ನು ಉಲಮಾಗಳು ವಿರೋಧಿಸಿದ್ದಾರೆ. ಅವರು ಹೋರಾಟಕ್ಕೆ ಕರೆ ಕೊಟ್ಟರೆ ಬ್ರಿಟಿಷರನ್ನು ದೇಶದಿಂದ ಹೇಗೆ ಹೊರದಬ್ಬಿದ್ದೇವೋ ಅದೇ ರೀತಿ ಸಂಘ ಪರಿವಾರವನ್ನು ಹೋರಾಟದ ಮೂಲಕ ಈ ದೇಶದಿಂದ ಓಡಿಸಲಿಕ್ಕಿದ್ದೇವೆ ಎಂದು ಎಚ್ಚರಿಸಿದರು.


ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮಾತನಾಡಿ ದೇಶದ ಪ್ರತಿಯೊಂದು ಸನ್ಮಸ್ಸು ಗಳು ಕೂಡ ಈ ಮಸೂದೆಯನ್ನು ವಿರೋಧಿಸುತ್ತದೆ. ಹಾಗಾಗಿ ಮಸೂದೆಯನ್ನು ವಾಪಸ್ ಪಡೆಯುವ ವರೆಗೆ ನಾವು ಹೋರಾಟ ಮುಂದುವರಿಸಲಿದ್ದೇವೆ. ವಿಷಕಾರಿ ಚಿಂತನೆಯ ಈ ಮಸೂದೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಹಾಕಲಿದ್ದೇವೆ ಎಂದರು. ಈ ಹೋರಾಟ, ಪ್ರತಿಭಟನೆಯ ಹಿಂದೆ ಎಸ್‌ಡಿಪಿಐಗೆ ಯಾವುದೇ ರಾಜಕೀಯ ಲಾಭದ ಉದ್ದೇಶವಿಲ್ಲ. ಮಸೂದೆ ಜಾರಿಯಾಗದಂತೆ ತಡೆಹಿಡಿಯುವುದೇ ನಮ್ಮ ಮುಖ್ಯ ಗುರಿಯಾಗಿದೆ. ಸಿಎಎ, ಎನ್‌ಆರ್‌ಸಿ ವಿರುದ್ಧ ಈ ಹಿಂದೆ ಮುಸ್ಲಿಂ ಸಮುದಾಯವು ಒಗ್ಗಟ್ಟಿನಿಂದ ಹೋರಾಟ ಮಾಡಿತ್ತು. ಅದೇ ಒಗ್ಗಟ್ಟಿನ ಪ್ರದರ್ಶನವು ಈ ಮಸೂದೆಯ ವಿರುದ್ಧವೂ ಆಗಬೇಕಿದೆ. ಅದಕ್ಕಾಗಿ ಸಮುದಾಯದ ಎಲ್ಲಾ ಉಲಮಾ-ಉಮರಾಗಳು, ಸಂಘಟನೆಗಳು ಮುಂದೆ ಬರಬೇಕಿದೆ ಎಂದು ರಿಯಾಝ್ ಕಡಂಬು ಹೇಳಿದರು.

ಪ್ರತಿಭಟನಾ ಸಭೆಯಲ್ಲಿ SDPI ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲ ಜೋಕಟ್ಟೆ,ಮಿಸ್ರಿಯ ಕಣ್ಣೂರು, ನಗರ ಜಿಲ್ಲಾಧ್ಯಕ್ಷ ಜಲೀಲ್ ಕೆ,ಉಪಾಧ್ಯಕ್ಷ ಅಶ್ರಫ್ ಅಡ್ಡೂರು, ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ, ನಗರ ಉಪಾಧ್ಯಕ್ಷೆ ಆಯಿಷಾ ಬಜ್ಪೆ, ನಗರ ವಿಮ್ ಅಧ್ಯಕ್ಷೆ ನಿಶಾ ವಾಮಂಜೂರು ಉಪಸ್ಥಿತರಿದ್ದರು.

