ಕದನ ವಿರಾಮ ಒಪ್ಪಂದ ಮುರಿದಿರುವ ಇಸ್ರೇಲ್, ಇಂದು (ಮಾ.18) ನಸುಕಿನಲ್ಲಿ ಗಾಝಾ ಪಟ್ಟಿಯಾದ್ಯಂತ ಭಾರೀ ವೈಮಾನಿಕ ದಾಳಿ ನಡೆಸಿದ್ದು, ಮಕ್ಕಳು ಸೇರಿದಂತೆ 100ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಅಲ್-ಜಝೀರಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜನವರಿ 19ರಿಂದ ಕದನ ವಿರಾಮ ಜಾರಿಯಾದ ಬಳಿಕ ಇಸ್ರೇಲ್ ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ. ಹಮಾಸ್ ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದಕ್ಕೆ ಇಸ್ರೇಲ್ ದಾಳಿ ನಡೆಸಿದೆ ಎಂದು ವರದಿಗಳು ಹೇಳಿವೆ.
ಹಮಾಸ್ ನಾಯಕರನ್ನು ಗುರಿಯಾಗಿಸಿ, ಅದರ ನೆಲೆಗಳ ಮೇಲೆ ದಾಳಿ ಮಾಡಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ.

ನಿನ್ನೆ (ಮಾ.17) ರಾತ್ರಿ ದಕ್ಷಿಣ ಸಿರಿಯಾದ ಡೆರಾ ಪ್ರಾಂತ್ಯದ ಹೊರವಲಯದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 19 ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾದ ರಾಜ್ಯ ಸುದ್ದಿ ಸಂಸ್ಥೆ ಸನಾ ವರದಿ ಮಾಡಿದೆ.
ಸೋಮವಾರ ರಾತ್ರಿ ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್ ಸೇನೆ ದೃಢಪಡಿಸಿದೆ. ಪದಚ್ಯುತ ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರ ಪಡೆಗಳಿಗೆ ಸೇರಿದ ಶಸ್ತ್ರಾಸ್ತ್ರಗಳು ಮತ್ತು ವಾಹನಗಳನ್ನು ಹೊಂದಿರುವ ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದು ಹೇಳಿದೆ.

ನಿನ್ನೆ (ಮಾ.17) ಸಿರಿಯಾ-ಲೆಬನಾನ್ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 52 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಸಾರ್ವಜನಿಕ ಆರೋಗ್ಯ ಸಚಿವಾಲಯ ತಿಳಿಸಿದೆ.
ನಮ್ಮ ಸೈನಿಕರನ್ನು ಲೆಬನಾನ್‌ಗೆ ಕರೆದೊಯ್ದು ಕೊಲ್ಲಲಾಗಿದೆ ಎಂದು ಸಿರಿಯಾ ಆರೋಪಿಸಿದೆ. ಆದರೆ, ಕೊಲ್ಲಲ್ಪಟ್ಟ ಮೂವರು ಕಳ್ಳಸಾಗಣೆದಾರರು ಎಂಬುವುದಾಗಿ ರಕ್ಷಣಾ ಸಚಿವರು ಕ್ಯಾಬಿನೆಟ್ ಸಭೆಯಲ್ಲಿ ತಿಳಿಸಿದ್ದಾರೆ ಎಂದು ಲೆಬನಾನ್‌ನ ಮಾಹಿತಿ ಸಚಿವ ಪಾಲ್ ಮೊರ್ಕೋಸ್ ಹೇಳಿದ್ದಾರೆ.

ಸಿರಿಯಾದ ಉತ್ತರ ಮತ್ತು ಪೂರ್ವ ಗಡಿಗಳಲ್ಲಿ ಹಿಂಸಾಚಾರಕ್ಕೆ ಪ್ರತಿಕ್ರಿಯಿಸಲು ಸೈನ್ಯಕ್ಕೆ ಆದೇಶ ನೀಡಿರುವುದಾಗಿ ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ನಿನ್ನೆ ಘೋಷಿಸಿದ್ದಾರೆ.
ಕಳೆದ ಶನಿವಾರ ಯೆಮನ್ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವು ಹೌತಿ ಬಂಡುಕೋರರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಲೆಫ್ಟಿನೆಂಟ್ ಜನರಲ್ ಅಲೆಕ್ಸಸ್ ಗ್ರಿನ್‌ಕೆವಿಚ್ ಹೇಳಿದ್ದಾರೆ. ಆರು ಮತ್ತು ಎಂಟು ವರ್ಷ ವಯಸ್ಸಿನ ಕನಿಷ್ಠ ಇಬ್ಬರು ಮಕ್ಕಳು ಸತ್ತವರಲ್ಲಿ ಸೇರಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ತಿಳಿಸಿದೆ.

ಅಮೆರಿಕದ ದಾಳಿಗಳಿಗೆ ಪ್ರತಿಕ್ರಿಯಿಸುವುದಾಗಿ ಪ್ರತಿಜ್ಞೆ ಮಾಡಿರುವ ಹೌತಿಗಳಿಗೆ ಬೆಂಬಲವಾಗಿ ಯೆಮನ್‌ನ ಸನಾದಲ್ಲಿ ಸಾವಿರಾರು ಜನರು ಸೋಮವಾರ ರ್‍ಯಾಲಿ ನಡೆಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ “ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಗಾಝಾದ ಜನರೊಂದಿಗೆ ಒಗ್ಗಟ್ಟು ತೋರಿಸಲು ಕೆಂಪು ಸಮುದ್ರದಲ್ಲಿ ಅಮೆರಿಕ ಮತ್ತು ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ದಾಳಿ ನಡೆಸಿರುವುದಾಗಿ ಹೌತಿಗಳು ಹೇಳಿಕೊಂಡಿದ್ದಾರೆ. ಗಾಝಾ ಮೇಲಿನ ಇಸ್ರೇಲ್ ದಿಗ್ಬಂಧನವು ಹದಿನಾರನೇ ದಿನಕ್ಕೆ ತಲುಪಿದೆ.
ವರದಿ :ನಾನು ಗೌರಿ