ಮಂಗಳೂರು : ಸ್ಪ್ಲೆಂಡರ್, ಆ್ಯಕ್ಟಿವಾಗಳನ್ನೇ ಟಾರ್ಗೆಟ್ ಮಾಡಿಕೊಂಡು 20 ದ್ವಿಚಕ್ರ ವಾಹನಗಳನ್ನು ಕದ್ದಿದ್ದ ಆರೋಪಿಯನ್ನು ಮಂಗಳೂರು ಮಹಾನಗರ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಂದ್ರಗುತ್ತಿ ಕಡಸೂರು ಮೂಲದ ಸದ್ಯ ಮೂಡುಬಿದಿರೆಯಲ್ಲಿ ವಾಸ್ತವ್ಯವಿರುವ ಮಣಿಕಂಠಗೌಡ ಕೆ (24) ಎಂಬಾತನೇ ಬೈಕ್ ಕದ್ದ ಆರೋಪಿ. ಈತ ಪಾರ್ಕಿಂಗ್ ಮಾಡಿದ್ದರಿಂದಲೇ ಬೈಕ್ ಅನ್ನು ಎಗರಿಸುವ ಚಾಲಾಕಿ. ಜಾತ್ರೆ, ಕೋಲ, ಕಂಬಳ, ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್ನಲ್ಲಿ ನಿಲ್ಲಿಸಿದ್ದ ಬೈಕ್ಗಳೇ ಈತನ ಟಾರ್ಗೆಟ್. ಈ ಖತರ್ನಾಕ್ ಖದೀಮ ಇದೀಗ ಪೊಲೀಸ್ ಅತಿಥಿಯಾಗಿದ್ದು, ಈತನಿಂದ 20 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೂಡುಬಿದಿರೆಯಲ್ಲಿ ಗ್ಯಾರೇಜ್ನಲ್ಲಿ ಕೆಲಸ ಮಾಡಿಕೊಂಡಿದ್ದರಿಂದ ಈತ ಕ್ಷಣಾರ್ಧದಲ್ಲಿ ದ್ವಿಚಕ್ರ ವಾಹನಗಳನ್ನು ಎಗರಿಸುವ ಚಾಕಚಕ್ಯತೆಯನ್ನು ಹೊಂದಿದ್ದ. ವಿಶೇಷವಾಗಿ ಹೀರೋ ಹೋಂಡಾ ಸ್ಪ್ಲೆಂಡರ್ಗಳಿಗೆ ರಿಸೇಲ್ ವ್ಯಾಲ್ಯೂ ಇರುವುದರಿಂದ ಅದನ್ನೇ ಕೇಂದ್ರೀಕರಿಸಿ ಕಳವು ಮಾಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಹೀಗೆ ಎಗರಿಸಿದ ಬೈಕ್ಗಳಿಗೆ ದಾಖಲೆ ಪತ್ರಗಳು ಇರದ ಕಾರಣ, ವಲಸೆ ಕಾರ್ಮಿಕರಿಗೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದ. ಮಣಿಕಂಠ ತಾನು ಕದ್ದ ಬೈಕ್ಗಳನ್ನು ಕಾರ್ಕಳದ ಹೊಸ್ಮಾರಿನ ಈದು ಗ್ರಾಮದ ಸತೀಶ್ ಬಂಗೇರ(32), ಮೂಡುಬಿದಿರೆಯ ವಲ್ಪಾಡಿ ಪಣಪಿಲ ಗ್ರಾಮದ ದೀಕ್ಷಿತ್ (23), ವಿಜಯಪುರ ಜಿಲ್ಲೆಯ ಮೂಲದ ಸದ್ಯ ಮೂಡುಬಿದಿರೆ ಕೊಡ್ಯಡ್ಕದಲ್ಲಿ ವಾಸವಿರುವ ಸಂಗಣ್ಣ ಹೊನ್ನಾಳಿ (30) ಎಂಬವರ ಮೂಲಕ ಮಾರಾಟ ಮಾಡಿಸುತ್ತಿದ್ದ. ಸದ್ಯ ಮೂಡುಬಿದಿರೆಯಲ್ಲಿ ಆತನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ತನಿಖೆಯ ವೇಳೆ ಮಣಿಕಂಠ ನೀಡಿದ ಮಾಹಿತಿಯನ್ವಯ ಕದ್ದ ಬೈಕ್ಗಳ ಮಾರಾಟಕ್ಕೆ ಸಹಕರಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಬಗ್ಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು, ‘ಮಂಗಳೂರಿನ ವಿವಿಧೆಡೆ ಬೈಕ್ ಕಳವು ಪ್ರಕರಣ ವರದಿಯಾಗುತ್ತಿತ್ತು. ಆದರೆ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಕಂಕನಾಡಿ ನಗರ ಠಾಣೆಯ ಕ್ರೈಂ ಟೀಂಗೆ ಆರೋಪಿಯ ಸುಳಿವು ಸಿಕ್ಕಿತ್ತು. ಆರೋಪಿ ಮೂಡಬಿದಿರೆಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ವರ್ಷದಿಂದ ಕಂಬಳೋತ್ಸವ, ಜಾತ್ರೋತ್ಸವ, ರೈಲ್ವೆ ಸ್ಟೇಷನ್, ಬಸ್ ಸ್ಟ್ಯಾಂಡ್ಗಳಲ್ಲಿ ಪಾರ್ಕ್ ಮಾಡಲಾಗುತ್ತಿದ್ದ ದ್ವಿಚಕ್ರ ವಾಹನ ಕದಿಯುತ್ತಿದ್ದ. ಹೀರೋ ಹೋಂಡಾ ಸ್ಪ್ಲೆಂಡರ್, ಆ್ಯಕ್ಟಿವಾಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಎರಡು ವರ್ಷದಿಂದ 20 ದ್ವಿಚಕ್ರ ವಾಹನ ಕಳವು ಮಾಡಿದ್ದು, ಅವುಗಳನ್ನ ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.