ವೈದ್ಯರ ನಿರ್ಲಕ್ಷ್ಯದಿಂದಾಗಿ ಸುಮಾರು ಎರಡು ತಿಂಗಳ ಕಾಲ ತಾನು ಮತ್ತು ಹೆಂಡತಿ ಅನುಭವಿಸಿದ ಸಂಕಷ್ಟವನ್ನು ವಿವರಿಸಿ ಪತಿ ಪತ್ರ ಬರೆದಿದ್ದಾರೆ.
ಮಂಗಳೂರು (ಫೆ.26): ವೈದ್ಯರ ಸಣ್ಣ ತಪ್ಪು ಕೂಡ ರೋಗಿಯ ಜೀವಕ್ಕೆ ಅಪಾಯವನ್ನುಂಟುಮಾಡುತ್ತವೆ. ಸಿಸೇರಿಯನ್ ಆದ ತನ್ನ ಹೆಂಡತಿಯ ಹೊಟ್ಟೆಯಲ್ಲಿ ವೈದ್ಯರು ಬಟ್ಟೆ ಉಂಡೆ (ಸರ್ಜಿಕಲ್ ಮಾಪ್) ಹಾಗೆಯೇ ಉಳಿಸಿದ್ದಾರೆ ಎಂದು ಪತಿಯೊಬ್ಬರು ದೂರು ನೀಡಿದ್ದಾರೆ. ಇದರಿಂದ ತನ್ನ ಹೆಂಡತಿಗೆ ಪ್ರತಿನಿತ್ಯ ಹಲವು ರೀತಿಯ ಸಮಸ್ಯೆ ಆಗುತ್ತಿದೆ ಎಂದು ಅವರು ಹೇಳಿದ್ದಾರೆ. ರೈತ ಮತ್ತು ವ್ಯಾಪಾರಿಯಾದ ಗಗನ್‌ದೀಪ್, ತನಗೂ ಮತ್ತು ತನ್ನ ಹೆಂಡತಿಗೂ ಆದ ಸಮಸ್ಯೆಯನ್ನು ಸಣ್ಣ ಬರಹದ ಮೂಲಕ ತಿಳಿಸಿದ್ದಾರೆ. ಪುತ್ತೂರು ಸಿಟಿ ಆಸ್ಪತ್ರೆಯ ಡಾಕ್ಟರ್ ಅನಿಲ್ ಎಸ್, 2024ರ ನವೆಂಬರ್ 27 ರಂದು ಹೆಂಡತಿಗೆ ಸಿಸೇರಿಯನ್ ಮಾಡಿದ್ದರು. 2024ರ ಡಿಸೆಂಬರ್ 2 ರಂದು ಡಿಸ್ಚಾರ್ಜ್ ಮಾಡಿದರು. ಆದರೆ ಒಂದು ವಾರದ ನಂತರ, 3-4 ದಿನಗಳ ಕಾಲ 104 ಡಿಗ್ರಿ ಜ್ವರವಿತ್ತು. ತಕ್ಷಣವೇ ಅದೇ ಆಸ್ಪತ್ರೆಗೆ ಹೋಗಿ ಡಾಕ್ಟರ್ ಅನ್ನು ಭೇಟಿಯಾದರು. ಹೆಂಡತಿ ಹೊಟ್ಟೆಯ ಒಂದು ಭಾಗದಲ್ಲಿ ಏನೋ ಅಸಾಮಾನ್ಯವಾದದ್ದು ಕಾಣುತ್ತಿದೆ ಎಂದು ಅವರು ಹೇಳಿದ್ದರು ಎಂದು ಬರೆದಿದ್ದಾರೆ.

ಈ ವೇಳೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿದಾಗ,ಸ್ಕ್ಯಾನಿಂಗ್ ವರದಿಯಲ್ಲಿ 10 ಸೆಂಟಿಮೀಟರ್ ಗಾತ್ರದ ವಸ್ತುವನ್ನು ಪತ್ತೆ ಮಾಡಲಾಯಿತು. ಆದರೆ ರೇಡಿಯಾಲಜಿಸ್ಟ್ ಅದರ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದರು ಎಂದಿದ್ದಾರೆ.
ಅದು ಹೆಮಟೋಮಾ ಆಗಿದ್ದು, ಹೊರಗಿನಿಂದ ಬಂದದ್ದಲ್ಲ ಎಂದು ವೈದ್ಯರು ತಿಳಿಸಿದ್ದರು. ಆದರೆ ಅಸ್ವಸ್ಥತೆ ಮುಂದುವರಿದ ಕಾರಣ, ದಂಪತಿಗಳು ಸಿಟಿ ಸ್ಕ್ಯಾನ್ ಮಾಡಬೇಕೆಂದು ಕೇಳಿದ್ದಾರೆ. ಕಾಲಾನಂತರದಲ್ಲಿ ಸಮಸ್ಯೆ ಪರಿಹರಿಸಲ್ಪಡುತ್ತದೆ ಎಂದು ವೈದ್ಯರು ಆಶ್ವಾಸನೆ ನೀಡಿದ್ದರು. ಜ್ವರಕ್ಕೆ ಔಷಧಿ ತೆಗೆದುಕೊಂಡ ಕಾರಣ ಜ್ವರವು ಕ್ರಮೇಣ ಕಡಿಮೆಯಾಯಿತು. ಆದರೆ ನಂತರದ ಪರೀಕ್ಷೆಗಳಲ್ಲಿ ಹೊಟ್ಟೆಯ ವಸ್ತುವಿನ ಗಾತ್ರದಲ್ಲಿ ಯಾವುದೇ ಕುಸಿತ ಕಂಡುಬರಲಿಲ್ಲ. ಅಲ್ಲದೆ, ಹೆಂಡತಿಗೆ ಕೀಲು, ಕಾಲು, ಮಣಿಕಟ್ಟು ಮುಂತಾದ ಸ್ಥಳಗಳಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭಿಸಿತು. ಇದು ಹೆಂಡತಿಗೆ ನಡೆಯಲು, ನಿಲ್ಲಲು ಮತ್ತು ಮಗುವಿಗೆ ಹಾಲುಣಿಸಲು ಸಾಧ್ಯವಾಗದಷ್ಟು ತೀವ್ರವಾಗಿತ್ತು.

ಮತ್ತೆ ಆಸ್ಪತ್ರೆಗೆ ಹೋದಾಗ ಅವರು ಮೂಳೆ ತಜ್ಞರನ್ನು ಭೇಟಿ ಮಾಡಲು ಸೂಚನೆ ನೀಡಿದ್ದರು. ಆ ಬಳಿಕ ಸಂಧಿವಾತ ತಜ್ಞರಿಗೂ ಶಿಫಾರಸು ಮಾಡಿದರು. ಆದರೆ, ಈ ಮಧ್ಯೆ ತೆಗೆದ ಸಿಟಿ ಸ್ಕ್ಯಾನ್‌ನಲ್ಲಿ ಹೊಟ್ಟೆಯಲ್ಲಿ ಸರ್ಜಿಕಲ್ ಮಾಪ್ ಇರುವುದು ದೃಢಪಟ್ಟಿತು. ಅಷ್ಟರಲ್ಲಿ ಸೋಂಕು ಶ್ವಾಸಕೋಶ, ರಕ್ತ ಮತ್ತು ಇತರ ಅಂಗಗಳಿಗೆ ಹರಡಿ ಜೀವಕ್ಕೆ ಅಪಾಯ ಉಂಟು ಮಾಡಿತ್ತು. ಸಿಟಿ ಸ್ಕ್ಯಾನ್ ವರದಿಯನ್ನು ಡಾಕ್ಟರ್ ಅನಿಲ್‌ಗೆ ತೋರಿಸಿದಾಗ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದರು ಎಂದು ಗಗನ್‌ದೀಪ್ ಬರೆದಿದ್ದಾರೆ.

https://x.com/deepubangaradka/status/1893213341234958497
ಕೊನೆಗೆ ಜನವರಿ 25 ರಂದು ಪುತ್ತೂರಿನ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಸರ್ಜಿಕಲ್ ಮಾಪ್ ಅನ್ನು ತೆಗೆದುಹಾಕಲಾಯಿತು.

ಫೆಬ್ರವರಿ 15 ರಂದು ಹೆಂಡತಿಯನ್ನು ಡಿಸ್ಚಾರ್ಜ್ ಮಾಡಲಾಯಿತು, ಆದರೆ ಈಗಲೂ ಔಷಧಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ಬರೆದಿದ್ದಾರೆ. ಹೆಂಡತಿಗೆ ಇನ್ನೂ ಮಗುವಿಗೆ ಹಾಲುಣಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ರಾಷ್ಟ್ರೀಯ ಗ್ರಾಹಕ ದೂರುಗಳ ಪೋರ್ಟಲ್ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ದೂರು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ದೂರಿನ ನಂತರ ಅಧಿಕಾರಿಗಳು ಮತ್ತು ವೈದ್ಯರ ಆರು ಜನರ ತಂಡವು ಪ್ರಕರಣವನ್ನು ತನಿಖೆ ಮಾಡುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಚ್ ಆರ್ ತಿಮ್ಮಯ್ಯ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಒಂದು ವಾರದೊಳಗೆ ತನಿಖೆ ಪೂರ್ಣಗೊಳಿಸಿ ಮುಂದಿನ ಕ್ರಮಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಪ್ರಧಾನ ಕಾರ್ಯದರ್ಶಿಗೆ ವರದಿ ನೀಡಬೇಕೆಂದು ಅವರು ಸೂಚಿಸಿದ್ದಾಗಿ ತಿಳಿಸಿದ್ದಾರೆ