ದೆಹಲಿ ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಇಂದು (ಫೆ.24) ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ವಿ.ಕೆ. ಸಕ್ಸೇನಾ ಅವರ ಭಾಷಣದ ಸಮಯದಲ್ಲಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ವಿರೋಧ ಪಕ್ಷದ ನಾಯಕಿ ಅತಿಶಿ ಮರ್ಲೇನಾ, ಮಾಜಿ ಸಚಿವ ಗೋಪಾಲ್ ರೈ ಮತ್ತು ಇತರ ಹತ್ತು ಎಎಪಿ ಶಾಸಕರನ್ನು ಒಂದು ದಿನದ ಮಟ್ಟಿಗೆ ವಿಧಾನಸಭೆಯಿಂದ ಅಮಾನತುಗೊಳಿಸಿದ್ದಾರೆ.

ಹೊಸದಾಗಿ ಆಯ್ಕೆಯಾದ ಶಾಸಕರೊಂದಿಗೆ ಮೂರು ದಿನಗಳ ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನ ಸೋಮವಾರ ಪ್ರಾರಂಭಗೊಂಡಿದೆ
ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಆಡಳಿತರೂಢ ಬಿಜೆಪಿ ಮತ್ತು ವಿರೋಧ ಪಕ್ಷದ ಶಾಸಕರೊಂದಿಗೆ, ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಮಾರ್ಗದರ್ಶನದಲ್ಲಿ ಸೋಮವಾರ ವಿಧಾನಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಹಿಂದಿನ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ ಬಾಕಿ ಇರುವ 14 ಸಿಎಜಿ (ಭಾರತದ ಲೆಕ್ಕಪರಿಶೋಧಕ ಜನರಲ್) ವರದಿಗಳನ್ನು ಇಂದು ಮಂಡಿಸಲು ಬಿಜೆಪಿ ಸರ್ಕಾರ ಮುಂದಾಗಿತ್ತು. ಆದರೆ, ಅದಕ್ಕೂ ಮುನ್ನ ಕಲಾಪದ ಆರಂಭದಲ್ಲಿಯೇ ವಿರೋಧ ಪಕ್ಷಗಳ ಸದಸ್ಯರು ಗದ್ದಲದ ಸೃಷ್ಟಿಸಿದ್ದಾರೆ.

ಬಾಕಿ ಇರುವ ಸಿಎಜಿ ವರದಿಗಳಲ್ಲಿ ರಾಜ್ಯ ಹಣಕಾಸು, ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ, ವಾಹನ ವಾಯು ಮಾಲಿನ್ಯ, ಮದ್ಯ ನಿಯಂತ್ರಣ ಮತ್ತು ದೆಹಲಿ ಸಾರಿಗೆ ನಿಗಮದ ಕಾರ್ಯನಿರ್ವಹಣೆ ಸೇರಿದಂತೆ ಹಲವಾರು ವಿಷಯಗಳನ್ನು ಒಳಗೊಂಡಿವೆ.