ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಪಿ.ಸಿ. ಜಾರ್ಜ್ ಸೋಮವಾರ (ಫೆ.24) ಕೇರಳದ ಕೊಟ್ಟಾಯಂನ ಎರಟ್ಟುಪೆಟ್ಟಾ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.

ಜಾರ್ಜ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಜಾರ್ಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿತ್ತು.”ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನು ನೀಡುವುದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ” ಎಂದು ಹೇಳಿತ್ತು. ಪೊಲೀಸರು ಜಾರ್ಜ್ ಅವರ ಬಂಧನಕ್ಕೆ ಮುಂದಾಗಿದ್ದರು.

ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ತಮ್ಮ ಮುಂದೆ ಹಾಜರಾಗಲು ಫೆಬ್ರವರಿ 24ರವರೆಗೆ ಅವಕಾಶ ನೀಡುವಂತೆ, ಶನಿವಾರ ಜಾರ್ಜ್ ಪೊಲೀಸರನ್ನು ಕೋರಿದ್ದರು.

ಮಾಜಿ ಶಾಸಕ ಜಾರ್ಜ್, ಟಿವಿ ಚಾನೆಲ್ ಚರ್ಚೆಯ ಸಂದರ್ಭದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ್ದರು. ಜಾರ್ಜ್ ಅವರ ಹೇಳಿಕೆಗಳು ಧಾರ್ಮಿಕ ದ್ವೇಷವನ್ನು ಪ್ರಚೋದಿಸಬಹುದು ಎಂದು ಆರೋಪಿಸಿ ಮುಸ್ಲಿಂ ಯೂತ್ ಲೀಗ್ ನಾಯಕ ಮುಹಮ್ಮದ್ ಶಿಹಾಬ್ ನೀಡಿದ ದೂರಿನ ಆಧಾರದ ಮೇಲೆ ಎರಟ್ಟುಪೆಟ್ಟ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಜನವರಿ 5, 2025ರಂದು ಟಿವಿ ವಾಹಿನಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದ ಪಿ.ಸಿ ಜಾರ್ಜ್, “ಭಾರತದಲ್ಲಿರುವ ಎಲ್ಲಾ ಮುಸ್ಲಿಮರು ಭಯೋತ್ಪಾದಕರು ಮತ್ತು ಕೋಮುವಾದಿಗಳು. ಭಾರತದಲ್ಲಿ ಭಯೋತ್ಪಾದಕರಲ್ಲದ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲ. ಮುಸ್ಲಿಮರು ದೇಶದ ಸಂಪತ್ತನ್ನು ಲೂಟಿ ಮಾಡುವ ಲೂಟಿಕೋರರು. ಮುಸ್ಲಿಂ ರಾಷ್ಟ್ರವನ್ನು ರಚಿಸಲು ಮುಸ್ಲಿಮರು ಲಕ್ಷಾಂತರ ಹಿಂದೂಗಳು ಮತ್ತು ಕ್ರಿಶ್ಚಿಯನ್ನರನ್ನು ಹತ್ಯೆ ಮಾಡಿದ್ದಾರೆ. ಎಲ್ಲಾ ಭಾರತೀಯ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು. ಎಲ್ಲಾ ಮುಸ್ಲಿಮರು ಕೋಮು ರಾಕ್ಷಸರು ಮತ್ತು ದುಷ್ಟರು” ಎಂದು ಹೇಳಿದ್ದರು