ಭಾರತ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿಯಾಗುತ್ತಿದ್ದು, ಪಂದ್ಯವು ದುಬೈನಲ್ಲಿ ನಡೆಯಲಿದೆ. ಬದ್ಧವೈರಿಗಳ ಕದನ ಕ್ರಿಕೆಟ್ ಜಗತ್ತಿಗೆ ಕುತೂಹಲ ಕೆರಳಿಸಿದೆ
ದುಬೈ: ಕೇವಲ ಐಸಿಸಿ, ಏಷ್ಯಾ ಕ್ರಿಕೆಟ್ ಟೂರ್ನಿಗಳಲ್ಲಷ್ಟೇ ಸಿಗುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಮುಖಾಮುಖಿಗೆ ಇದೀಗ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ. ಚಾಂಪಿಯನ್ಸ್ ಟ್ರೋಫಿಯ ಬಹುನಿರೀಕ್ಷಿತ ಪಂದ್ಯ ಭಾನುವಾರ ಇಲ್ಲಿ ನಡೆಯಲಿದ್ದು, ಬದ್ಧವೈರಿಗಳ ಕದನ ಕ್ರಿಕೆಟ್ ಜಗತ್ತಿಗೆ ಕುತೂಹಲ ಕೆರಳಿಸಿದೆ. ಅದರಲ್ಲೂ ಟೂರ್ನಿಗೂ ಮುನ್ನ ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಡುವಿನ ತಿಕ್ಕಾಟ, ಈ ಪಂದ್ಯಕ್ಕೆ ಮತ್ತಷ್ಟು ಕಿಚ್ಚು ಹಚ್ಚಲಿದೆ.

ಬಿಸಿಸಿಐನಿಂದಾಗಿ ಭಾರತ-ಪಾಕ್ ಪಂದ್ಯ ದುಬೈಗೆ ಸ್ಥಳಾಂತರಗೊಂಡಿದೆ ಎನ್ನುವ ಸಿಟ್ಟು ಪಿಸಿಬಿಗಿದ್ದು, ಟೂರ್ನಿಯಲ್ಲಿ ಚಾಂಪಿಯನ್ ಆಗದಿದ್ದರೂ ತೊಂದರೆಯಿಲ್ಲ, ಭಾರತ ವಿರುದ್ಧ ಗೆಲ್ಲಬೇಕು ಎನ್ನುವ ಮನಸ್ಥಿತಿಯಲ್ಲಿ ಪಾಕ್ ಆಟಗಾರರು ಇದ್ದರೂ ಅಚ್ಚರಿಯಿಲ್ಲ.
ಇನ್ನು, ಒಂದೆಡೆ ಟೂರ್ನಿಯಲ್ಲಿ ಶುಭಾರಂಭ ಮಾಡಿ, ಸೆಮಿಫೈನಲ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಭಾರತ. ಮತ್ತೊಂದೆಡೆ ತಾನೇ ಆತಿಥ್ಯ ವಹಿಸುತ್ತಿರುವ ಟೂರ್ನಿಯಲ್ಲಿ ಗುಂಪು ಹಂತದಲ್ಲೇ ಹೊರಬೀಳುವ ಆತಂಕ ಎದುರಿಸುತ್ತಿರುವ ಪಾಕಿಸ್ತಾನ. ಈ ದೃಷ್ಟಿಕೋನವು ಪಂದ್ಯದ ರೋಚಕತೆಯನ್ನು ಹೆಚ್ಚಿಸಲಿದೆ.

ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್.
ಪಾಕಿಸ್ತಾನ: ಇಮಾಮ್ ಉಲ್ ಹಕ್, ಬಾಬರ್ ಅಹಮದ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ನಾಯಕ), ಸಲ್ಮಾನ್, ತಯ್ಯಬ್, ಖುಷ್‌ದಿಲ್, ಶಾಹೀನ್ ಅಫ್ರಿದಿ, ನಸೀಂ ಶಾ, ಹ್ಯಾರಿಸ್ ರೌಫ್, ಅಬ್ರಾರ್.

ನೇರ ಪ್ರಸಾರ: ಜಿಯೋ ಹಾಟ್‌ಸ್ಟಾರ್, ಸ್ಟಾರ್ ಸ್ಪೋರ್ಟ್ಸ್
ಸಮಯ: ಮಧ್ಯಾಹ್ನ 2.30
ಪಿಚ್ ರಿಪೋರ್ಟ್
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಇಬ್ಬನಿಯ ಸಮಸ್ಯೆ ಎದುರಾಗಲಿಲ್ಲ. ಈ ಪಂದ್ಯದಲ್ಲೂ ಅದೇ ರೀತಿಯ ವಾತಾವರಣ ಇರುವ ನಿರೀಕ್ಷೆ ಇದ್ದು, ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟ್ ಮಾಡುವ ಸಾಧ್ಯತೆಯೇ ಹೆಚ್ಚು. ಪಿಚ್ ನಿಧಾನಗತಿಯಲ್ಲಿ ವರ್ತಿಸಲಿದ್ದು, ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದಾರೆ.

14,000 ರನ್ ಹೊಸ್ತಿಲಲ್ಲಿ ಕೊಹ್ಲಿ
ಏಕದಿನ ಕ್ರಿಕೆಟ್‌ನಲ್ಲಿ 14000 ರನ್ ಪೂರೈಸಲು ವಿರಾಟ್ ಕೊಹ್ಲಿಗೆ ಕೇವಲ 15 ರನ್ ಬೇಕಿದೆ. ಈ ಪಂದ್ಯದಲ್ಲಿ ಆ ಮೈಲಿಗಲ್ಲು ತಲುಪಲು ಕೊಹ್ಲಿ ಕಾತರಿಸುತ್ತಿದ್ದಾರೆ.
ದುಬೈ ಭಾರತದ ಅದೃಷ್ಟ ತಾಣ!
ದುಬೈ ಅಂ.ರಾ. ಕ್ರೀಡಾಂಗಣದಲ್ಲಿ ಭಾರತ ಉತ್ತಮ ದಾಖಲೆ ಹೊಂದಿದೆ. ಇಲ್ಲಿ ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿದೆ. ಮತ್ತೊಂದೆಡೆ ಪಾಕಿಸ್ತಾನ ಇಲ್ಲಿ ಆಡಿರುವ 22ರಲ್ಲಿ 13ರಲ್ಲಿ ಸೋತಿದೆ.