ಶನಿವಾರ ಮಧ್ಯಾಹ್ನದೊಳಗೆ ನಿಗದಿತ ಸಮಯಕ್ಕೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಪ್ಯಾಲೆಸ್ತೀನಿ ಹೋರಾಟಗಾರರ ಪ್ರತಿರೋಧ ಸಂಘಟನೆಯಾದ ಹಮಾಸ್‌ನೊಂದಿಗಿನ ಕದನ ವಿರಾಮ ಕೊನೆಗೊಳ್ಳುತ್ತದೆ ಮತ್ತು ಗಾಜಾದಲ್ಲಿ ತಮ್ಮ ಮಿಲಿಟರಿ ದಾಳಿಯನ್ನು ಇಸ್ರೇಲ್ ಪಡೆಗಳು ಪುನರಾರಂಭಿಸುತ್ತವೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿದ್ದಾರೆ. ಶನಿವಾರದೊಳಗೆ

“ಶನಿವಾರ ಮಧ್ಯಾಹ್ನದೊಳಗೆ ಹಮಾಸ್ ನಮ್ಮ ಒತ್ತೆಯಾಳುಗಳನ್ನು ಹಿಂತಿರುಗಿಸದಿದ್ದರೆ, ಕದನ ವಿರಾಮ ಕೊನೆಗೊಳ್ಳುತ್ತದೆ. ಜೊತೆಗೆ ಐಡಿಎಫ್ [ಇಸ್ರೇಲ್ ರಕ್ಷಣಾ ಪಡೆಗಳು] ಹಮಾಸ್ ಅನ್ನು ಅಂತಿಮವಾಗಿ ಸೋಲಿಸುವವರೆಗೆ ತೀವ್ರ ಹೋರಾಟಕ್ಕೆ ಇಳಿಯುತ್ತದೆ” ಎಂದು ಅವರು ದೇಶದ ಭದ್ರತಾ ಸಂಪುಟ ಸಭೆಯ ನಂತರ ಹೇಳಿದ್ದಾರೆ.

ಕದನ ವಿರಾಮವನ್ನು “ಇಸ್ರೇಲ್ ಉಲ್ಲಂಘನೆ” ಮಾಡಿದೆ ಎಂದು ಪ್ರತಿಪಾದಿಸಿ ಶನಿವಾರ ಯೋಜಿಸಲಾದ ಒತ್ತೆಯಾಳುಗಳ ಬಿಡುಗಡೆಯನ್ನು ಮುಂದಿನ ಸೂಚನೆ ಬರುವವರೆಗೆ ವಿಳಂಬಗೊಳಿಸುವುದಾಗಿ ಹಮಾಸ್ ಹೇಳಿದ ಒಂದು ದಿನದ ನಂತರ ಇಸ್ರೇಲ್ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. ಕದನ ವಿರಾಮವನ್ನು ಉಲ್ಲಂಘಿಸಿ ಗಾಜಾ ನಿವಾಸಿಗಳ ಮೇಲೆ ಇಸ್ರೇಲ್ ದಾಳಿ ಮಾಡಿದೆ ಎಂದು ಹಮಾಸ್ ಆರೋಪಿಸಿದೆ. ಶನಿವಾರದೊಳಗೆ

ಶನಿವಾರ ಮಧ್ಯಾಹ್ನದ ವೇಳೆಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೇಡಿಕೆಯನ್ನು ಇಸ್ರೇಲ್ ಭದ್ರತಾ ಸಂಪುಟ ಸ್ವಾಗತಿಸಿದೆ ಎಂದು ನೆತನ್ಯಾಹು ಹೇಳಿದ್ದು, “ಮತ್ತು ಗಾಜಾದ ಭವಿಷ್ಯಕ್ಕಾಗಿ ಅಮೆರಿಕಾ ಅಧ್ಯಕ್ಷರ ಕ್ರಾಂತಿಕಾರಿ ದೃಷ್ಟಿಕೋನವನ್ನು ನಾವೆಲ್ಲರೂ ಸ್ವಾಗತಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಗಾಜಾ ಬಗ್ಗೆ ಟ್ರಂಪ್ ಹೇಳಿಕೆ
ಶನಿವಾರದೊಳಗೆ ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಹಿಂತಿರುಗಿಸದಿದ್ದರೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವನ್ನು ರದ್ದುಗೊಳಿಸುವ ಪ್ರಸ್ತಾಪವನ್ನು ಮಂಡಿಸುವುದಾಗಿ ಟ್ರಂಪ್ ಸೋಮವಾರ ಹೇಳಿದ್ದರು.

“ನನ್ನ ಮಟ್ಟಿಗೆ ಹೇಳುವುದಾದರೆ, ಶನಿವಾರ [ಫೆಬ್ರವರಿ 15] 12 ಗಂಟೆಯೊಳಗೆ ಎಲ್ಲಾ ಒತ್ತೆಯಾಳುಗಳನ್ನು ಹಿಂತಿರುಗಿಸದಿದ್ದರೆ ಒಪ್ಪಂದವನ್ನು ರದ್ದು ಮಾಡಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ. ಒಪ್ಪಂದವನ್ನು ರದ್ದುಗೊಳಿಸಿ, ಎಲ್ಲಾ ಸ್ಪರ್ಧೆಗಳು ಮುಗಿದಿದ್ದು, ನರಕ ದರ್ಶನವಾಗಲಿ ಎಂದು ನಾನು ಹೇಳುತ್ತೇನೆ” ಎಂದು ಟ್ರಂಪ್ ಶ್ವೇತಭವನದಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
ಗಾಜಾದಲ್ಲಿ ವಾಸಿಸುವ ಪ್ಯಾಲೆಸ್ತೀನಿಯನ್ನರನ್ನು ಶಾಶ್ವತವಾಗಿ ಸ್ವೀಕರಿಸುವ ಅಮೆರಿಕದ ಬೇಡಿಕೆಯನ್ನು ಈಜಿಪ್ಟ್ ಮತ್ತು ಜೋರ್ಡಾನ್ ವಿರೋಧಿಸಿದರೆ, ಅವರಿಗೆ ನೀಡುವ ಸಹಾಯವನ್ನು ಕಡಿತಗೊಳಿಸಲಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ. ಜೋರ್ಡಾನ್ ಮತ್ತು ಈಜಿಪ್ಟ್‌ನ ನಾಯಕರು ಗಾಜಾದಿಂದ ಪ್ಯಾಲೆಸ್ತೀನಿಯನ್ನರನ್ನು ಸ್ವೀಕರಿಸುವಂತೆ ಟ್ರಂಪ್ ಒತ್ತಾಯಿಸಿದ್ದರು ಮತ್ತು ಗಾಜಾವನ್ನು ತಾವು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತೇವೆ ಎಂದು ಹೇಳಿದ್ದರು.
ಅದಾಗ್ಯೂ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಈ ಪ್ರಸ್ತಾವನೆಯನ್ನು ಜೋರ್ಡಾನ್ ಮತ್ತು ಈಜಿಫ್ಟ್, ಪಶ್ಚಿಮ ದಂಡೆ ಪ್ರದೇಶವನ್ನು ನಿಯಂತ್ರಿಸುವ ಪ್ಯಾಲೆಸ್ತೀನಿ ಪ್ರಾಧಿಕಾರ ಮತ್ತು ಹಮಾಸ್ ತಿರಸ್ಕರಿಸಿವೆ.