ಭಾರತ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳ ಜನರು ಹೊಸ ವರ್ಷದ ಸಂಭ್ರದಲ್ಲಿದ್ದರೆ, ಗಾಝಾದ ಜನತೆ ಮಾತ್ರ ಅದೇ ನೋವು, ಅದೇ ಹಸಿವಿನ ನರಳಾಟ ಮುಂದುವರೆಸಿದ್ದಾರೆ.

ಉಸಿರಾಡುವ ಹಕ್ಕನ್ನೂ ಕಳೆದುಕೊಂಡಿರುವ ನತದೃಷ್ಟ ಜನರಿಗೆ ಎಲ್ಲಿಯ ಹೊಸವರ್ಷ, ಎಲ್ಲಿಯ ಸಂಭ್ರಮಾಚರಣೆ?
ಮಾನವೀಯತೆಯ ಕನಿಷ್ಠ ಅಂಶವನ್ನೂ ಮಾರಿಬಿಟ್ಟಿರುವ ಸೋ ಕಾಲ್ಡ್ ಪ್ರಬಲ ರಾಷ್ಟ್ರ ಇಸ್ರೇಲ್ ಜನವರಿ 1 ರಂದ ಹೊಸ ವರ್ಷದಂದು ಆಕ್ರಮಿತ ಪಶ್ಚಿಮ ದಂಡೆ, ಉತ್ತರ ಗಾಝಾದ ಜಬಲಿಯಾ ಮತ್ತು ಬುರೇಜ್ ನಿರಾಶ್ರಿತರ ಶಿಬಿರಗಳ ಮೇಲೆ ದಾಳಿ ನಡೆಸಿ ಮಕ್ಕಳು ಸೇರಿದಂತೆ 17 ಜನರನ್ನು ಹತ್ಯೆ ಮಾಡಿದೆ.

ಕಳೆದ ಒಂದು ವಾರದಿಂದ ಭಾರೀ ಮಳೆಯ ಪರಿಣಾಮ ಗಾಝಾದಾದ್ಯಂತ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿರುವ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ತಂಗಿರುವ ತಾತ್ಕಾಲಿಕ ಟೆಂಟ್ಗಳಿಗೆ ನೀರು ನುಗ್ಗಿ ಆಹಾರ ವಸ್ತುಗಳು ಹಾಳಾಗಿವೆ. ಮಲಗಲೂ ಆಗದ ಪರಿಸ್ಥಿತಿ ಉಂಟಾಗಿದೆ. ಈ ನಡುವೆ ಇಸ್ರೇಲ್ ಆಕ್ರಮ ಮುಂದುವರೆಸಿರುವುದು ಇನ್ನಷ್ಟು ಸಂಕಷ್ಟಕ್ಕೆ ನೂಕಿದೆ.

ಕಳೆದ ವಾರ ಉತ್ತರ ಗಾಝಾದ ಆಸ್ಪತ್ರೆ ಕಮಲ್ ಅದ್ವಾನ್ ಮೇಲೆ ದಾಳಿ ನಡೆಸಿದ್ದ ಇಸ್ರೇಲ್ ಸೇನೆ, ಕೊನೆಗೆ ಬಾಕಿ ಉಳಿದಿದ್ದ ಏಕೈಕ ವೈದ್ಯಕೀಯ ವ್ಯವಸ್ಥೆಯನ್ನು ನಾಶ ಮಾಡಿದೆ. ಇದರಿಂದ ಹಲವರ ಪ್ರಾಣ ಕಳೆದುಕೊಂಡಿದ್ದಾರೆ. ಆಸ್ಪತ್ರೆಯ ನಿರ್ದೇಶಕ ಡಾ.ಹುಸ್ಸಾಮ್ ಅಬೂ ಸಫಿಯಾ ಸೇರಿದಂತೆ ಕೆಲವರನ್ನು ಇಸ್ರೇಲ್ ಸೇನೆ ಬಂಧಿಸಿಟ್ಟಿದೆ. ಕಮಲ್ ಅದ್ವಾನ್ ಆಸ್ಪತ್ರೆ ಮೇಲಿನ ದಾಳಿ ಗಾಝಾದ ಸಂಪೂರ್ಣ ವೈದ್ಯಕೀಯ ವ್ಯವಸ್ಥೆಯನ್ನು ನಾಶ ಮಾಡಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

‘ಭಾರೀ ಬೆಲೆ ತೆರಬೇಕಾಗುತ್ತದೆ’
ಇಸ್ರೇಲ್ ಗಾಝಾದಲ್ಲಿ ನಿರಂತರ ನರಮೇಧ ನಡೆಸಿ ಸಂಪೂರ್ಣ ದೇಶವನ್ನೇ ನರಕ ಮಾಡಿದರೂ ಒಬ್ಬರೂ ಪ್ರಶ್ನಿಸುವವರು ಇಲ್ಲ. ಇದಕ್ಕೆ ಜಗತ್ತು ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇಸ್ತಾಂಬುಲ್ ಝೈಮ್ ವಿಶ್ವವಿದ್ಯಾಲಯದ ಇಸ್ಲಾಂ ಮತ್ತು ಜಾಗತಿಕ ವ್ಯವಹಾರಗಳ ಕೇಂದ್ರದ ನಿರ್ದೇಶಕ ಸಮಿ ಅಲ್-ಅರಿಯನ್ ಎಚ್ಚರಿಸಿದ್ದಾರೆ.

ಅಕ್ಟೋಬರ್ 7, 2023ರಿಂದ ಇಸ್ರೇಲ್ ಗಾಝಾದಲ್ಲಿ ನಡೆಸಿದ ಆಕ್ರಮಣದಲ್ಲಿ ಸಾವನ್ನಪ್ಪಿದ ಜನರ ಸಂಖ್ಯೆ 45,541 ದಾಟಿದೆ. ಬರೋಬ್ಬರಿ 108,338 ಜನರು ಗಾಯಗೊಂಡಿದ್ದಾರೆ.