ಬೆಂಗಳೂರು: ಉಪಚುನಾವಣೆಯಲ್ಲಿ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಮೂರು ಕ್ಷೇತ್ರಗಳಲ್ಲೂ ಜನರು ‘ಕೈ’ ಹಿಡಿದಿದ್ದಾರೆ. ಜನ ಬೆಂಬಲಕ್ಕೆ ಕಾಂಗ್ರೆಸ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ಅಭಿವೃದ್ಧಿಗೆ ಒಲವು, ಗ್ಯಾರಂಟಿಗೆ ಗೆಲುವು ಎಂದು ಅಭಿಪ್ರಾಯಪಟ್ಟಿದೆ.

ಸಂಡೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಿದ್ದಾರೆ. ಇತ್ತ ಚನ್ನಪಟ್ಟಣದಲ್ಲಿ ‘ಕೈ’ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, ಗೆಲುವಿಗೆ ಸನಿಹವಿದ್ದಾರೆ. ಶಿಗ್ಗಾಂವಿಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಜಯದ ಅಂಚಿನಲ್ಲಿದ್ದಾರೆ.

ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲೂ ಗೆಲ್ಲಲಿದೆ ಎಂದು ಸಿಎಂ, ಡಿಸಿಎಂ ಸೇರಿದಂತೆ ಅನೇಕ ‘ಕೈ’ ನಾಯಕರು ಭವಿಷ್ಯ ನುಡಿದಿದ್ದರು. ಎನ್ಡಿಎ ಅಭ್ಯರ್ಥಿಗಳ ಗೆಲುವಿನ ಬಗ್ಗೆ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ಕೂಡ ವಿಶ್ವಾಸ ವ್ಯಕ್ತಪಡಿಸಿದ್ದರು
ಗ್ಯಾರಂಟಿಗೆ ಹಣವಿಲ್ಲದೇ ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ. ಗೃಹಲಕ್ಷ್ಮಿ ಯೋಜನೆ ಹಣ ಕೆಲ ತಿಂಗಳಿಂದ ಬಿಡುಗಡೆ ಆಗಿಲ್ಲ. ಶಕ್ತಿ ಯೋಜನೆ ನಿಲ್ಲಿಸುತ್ತಾರೆ. ಯುವಕರಿಗೆ ಯುವನಿಧಿ ಹಣ ಬಂದಿಲ್ಲ ಎಂದು ಗ್ಯಾರಂಟಿ ಯೋಜನೆಗಳನ್ನು ಟಾರ್ಗೆಟ್ ಮಾಡಿ ಬಿಜೆಪಿ ನಾಯಕರು ಪ್ರಚಾರ ನಡೆಸಿದ್ದರು.

ಗ್ಯಾರಂಟಿ ಯೋಜನೆಯಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ. ಸರ್ಕಾರದ ಬಳಿ ಹಣ ಇಲ್ಲ ಎಂದು ಸಹ ಬಿಜೆಪಿ ಆರೋಪಿಸಿತ್ತು. ಆದರೆ, ಈಗ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆದ್ದಿದೆ.