ಡೆಹ್ರಾಡೂನ್: ಪುಣೆ ಪೋರ್ಷೆ ಕಾರು ಅಪಘಾತ, ಬೆಂಗಳೂರಿನ ಬೆಂಜ್ ಕಾರು ದುರಂತ ಮಾಸುವ ಮುನ್ನವೇ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ಓವರ್ ಸ್ಪೀಡ್‌ನಲ್ಲಿ ಬರುತ್ತಿದ್ದ ಕಾರು ಟ್ರಕ್‌ಗೆ ಡಿಕ್ಕಿಯಾಗಿದ್ದು, 6 ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಾರು, ಟ್ರಕ್‌ಗೆ ಗುದ್ದಿದ ರಭಸಕ್ಕೆ ಕಾರಿನ ರೂಫ್ ಟಾಪ್ ಕಿತ್ತುಕೊಂಡು ಆಕಾಶದೆತ್ತರಕ್ಕೆ ಹಾರಿ ಹೋಗಿದೆ. ಕಾರು ನುಜ್ಜುಗುಜ್ಜಾಗುವ ಜೊತೆಗೆ ಕಾರಿನಲ್ಲಿದ್ದವರ ದೇಹ ಚೆಲ್ಲಾಪಿಲ್ಲಿಯಾಗಿ ರಸ್ತೆ ತುಂಬೆಲ್ಲಾ ಬಿದ್ದಿದೆ.

ಅಸಲಿಗೆ ಆಗಿದ್ದೇನು?
ಮೃತಪಟ್ಟ 6 ಜನರು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಕಳೆದ ನವೆಂಬರ್ 12ರ ಮಧ್ಯರಾತ್ರಿ ಈ ಸ್ನೇಹಿತ, ಸ್ನೇಹಿತೆಯರು ಸಖತ್ ಪಾರ್ಟಿ ಮಾಡಿದ್ದಾರೆ. ಕುಡಿದು ಚೆನ್ನಾಗಿ ಡ್ಯಾನ್ಸ್ ಮಾಡಿದ್ದ ಯುವಕರು ಮಧ್ಯರಾತ್ರಿ 1.30ರ ಸುಮಾರಿಗೆ ಟ್ರಕ್‌ಗೆ ಗುದ್ದಿ ಪ್ರಾಣ ಬಿಟ್ಟಿದ್ದಾರೆ.

ಅಪಘಾತದ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿಸಿದ್ದಾರೆ. ಅಪಘಾತದ ದೃಶ್ಯದಲ್ಲಿ ಇನ್ನೋವಾ ಕಾರಿನಲ್ಲಿದ್ದ ಸ್ನೇಹಿತರು ಮತ್ತೊಂದು BMW ಕಾರಿನ ಜೊತೆ ರೇಸ್ ಹೋಗಿದ್ದಾರೆ. ಇನ್ನೋವಾ ಹಾಗೂ BMW ರೇಸ್‌ನಿಂದಾಗಿ ಈ ಭೀಕರ ಅಪಘಾತ ನಡೆದಿದೆ ಎನ್ನಲಾಗಿದೆ.

ಅಪಘಾತದಲ್ಲಿ ಮೃತಪಟ್ಟವರನ್ನ ಹಿಮಾಚಲ ಪ್ರದೇಶದ 23 ವರ್ಷದ ಕುನಾಲ್ ಕುಕ್ರೇಜಾ ಎಂದು ಗುರುತಿಸಲಾಗಿದೆ. ಉಳಿದವರು ಡೆಹ್ರಾಡೂನ್ ಮೂಲದ ಅತುಲ್ ಅಗರವಾಲ್ (24), ರಿಷಭ್ ಜೈನ್ (24), ನವ್ಯಾ ಗೋಯೆಲ್ (23) ಕಾಮಾಕ್ಷಿ (20) ಮತ್ತು ಗುನೀತ್ (19) ಎಂದು ಗುರುತಿಸಲಾಗಿದೆ. 25 ವರ್ಷದ ಸಿದ್ದೇಶ್ ಅಗರ್ವಾಲ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.