ಜಾರ್ಖಂಡ್ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಹಾರಾಟವನ್ನು ತೆಯಲಾಗಿದೆ ಎಂದು ಪಕ್ಷವೂ ಆರೋಪಿಸಿದ್ದು, ”ಚುನಾವಣಾ ಪ್ರಚಾರವನ್ನು ನಿಲ್ಲಿಸಲು ಇದು ಹೊಸ ಮಾರ್ಗವೇ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಟೇಕಾಫ್‌ಗೆ ಏರ್ ಟ್ರಾಫಿಕ್ ಕಂಟ್ರೋಲ್ ಅನುಮತಿ ನೀಡದ ಹಿನ್ನೆಲೆಯಲ್ಲಿ ಶುಕ್ರವಾರ ಜಾರ್ಖಂಡ್‌ನ ಗೊಡ್ಡಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಲಿಕಾಪ್ಟರ್ ಅನ್ನು ತಡೆಯಲಾಗಿದೆ. ಇದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಅಂತಿಮ ಹಂತದ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರವನ್ನು ದಿಕ್ಕು ತಪ್ಪಿಸುವ ಉದ್ದೇಶಪೂರ್ವಕ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದೆ

ಹೆಲಿಕಾಪ್ಟರ್‌ಗೆ ಸುಮಾರು 45 ನಿಮಿಷಗಳವರೆಗೆ ಕ್ಲಿಯರೆನ್ಸ್ ಸಿಗಲಿಲ್ಲ ಮತ್ತು ಇನ್ನೂ ಅವರ ಹೆಲಿಕಾಪ್ಟರ್ ಅಲ್ಲಿಯೆ ಇದೆ ಎಂದು ಟೈಮ್ಸ್ ಆಫ್ ಇಂಡಿಯಾ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮಾಡಿರುವ ವರದಿಯಲ್ಲಿ ಹೇಳಿದೆ. ಗೊಡ್ಡಾದಿಂದ ಸುಮಾರು 150 ಕಿಮೀ ದೂರದಲ್ಲಿರುವ ಚಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕಾರಣ ಇದು ಏರ್ ಟ್ರಾಪಿಕ್ ಕಂಟ್ರೋಲ್ ಮಾಡುವವರ ಉದ್ದೇಶಪೂರ್ವಕ ಕೃತ್ಯ ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರಧಾನಿ ದಿಯೋಗರ್‌ನಲ್ಲಿದ್ದಾರೆ ಎಂಬ ಕಾರಣಕ್ಕಾಗಿ, ರಾಹುಲ್ ಗಾಂಧಿ ಅವರಿಗೆ ಆ ಪ್ರದೇಶವನ್ನು ದಾಟಲು ಅವಕಾಶ ನೀಡಲಿಲ್ಲ … ಈ ಬಗ್ಗೆ ಪ್ರೋಟೋಕಾಲ್ ಇದೆ ಎಂಬುವುದು ನಮಗೆ ತಿಳಿದಿದೆ. ಆದರೆ ಕಾಂಗ್ರೆಸ್ 70 ವರ್ಷಗಳ ಕಾಲ ದೇಶವನ್ನು ಆಳಿತ್ತು. ಆದರೆ, ಯಾವುದೇ ವಿರೋಧ ಪಕ್ಷದ ನಾಯಕನಿಗೆ ಎಂದಿಗೂ ಹೀಗೆ ಸಂಭವಿಸಿಲ್ಲ… ಇದು ಸ್ವೀಕಾರಾರ್ಹವಲ್ಲ” ಎಂದು ಮಹಾಗಾಮಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಿಕಾ ಪಾಂಡೆ ಸಿಂಗ್ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಬಿವಿ ಶ್ರೀನಿವಾಸ್ ಅವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, “ಅಷ್ಟಕ್ಕೂ ಜಾರ್ಖಂಡ್‌ನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಹಾರಾಟವನ್ನು ತಡೆಯಲು ಕಾರಣವೇನು?ಚುನಾವಣಾ ಪ್ರಚಾರವನ್ನು ನಿಲ್ಲಿಸಲು ಇದು ಹೊಸ ಮಾರ್ಗವೇ?” ಎಂದು ಪ್ರಶ್ನಿಸಿದ್ದಾರೆ.