ಕಡಬ ತಾಲೂಕಿನಲ್ಲಿ ವಾಸಿಸುತ್ತಿದ್ದ ವೃದ್ಧ ದಂಪತಿಯ ಮನೆಯನ್ನು ಅಧಿಕಾರಿಗಳು ಧ್ವಂಸ ಮಾಡಿದ್ದಾರೆ. ಈ ಘಟನೆಯಿಂದಾಗಿ ದಂಪತಿಗಳು ತೀವ್ರ ಆಘಾತಕ್ಕೀಡಾಗಿದ್ದಾರೆ. ಭೂಮಿ ವಿವಾದದಿಂದಾಗಿ ಮನೆ ಕಳೆದುಕೊಂಡಿರುವ ದಂಪತಿಗಳು ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣಕ್ಕೆ ಅನುಮತಿ ಕೋರಿದ್ದಾರೆ.

ಮಂಗಳೂರು, ನವೆಂಬರ್ 13: ದಯಾಮರಣ (Euthaniz) ಕೋರಿ ವೃದ್ಧ ದಂಪತಿ (Couple) ರಾಷ್ಟ್ರಪತಿಗಳಿಗೆ (Presedent) ಪತ್ರ ಬರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿಯಲ್ಲಿ ವಾಸವಾಗಿರುವ ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿಯ ಮನೆಯನ್ನು ಇಂದು (ನ.13) ಏಕಾಏಕಿ ಧ್ವಂಸಗೊಳಿಸಲಾಗಿದೆ. ಇದರಿಂದ ಕಂಗಾಲ ಆಗಿರುವ ದಂಪತಿ ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

ಮನೆ ಧ್ವಂಸಕ್ಕೆ ಕಾರಣ
ದಂಪತಿ ಮೂಲತಃ ಚಿತ್ರದುರ್ಗ ಜಿಲ್ಲೆಯ ಹುಟ್ಟಿಯವರು. ದಂಪತಿ ಕೂಲಿ ಕೆಲಸ ನಿಮಿತ್ಯ ಕಡಬ ತಾಲೂಕು, ಉಪ್ಪಿನಂಗಡಿ ಹೋಬಳಿ, ಕೌಕ್ರಾಡಿ ಗ್ರಾಮಕ್ಕೆ ಆಗಮಿಸಿವಾಗಿದ್ದಾರೆ. ಕೌಕ್ರಾಡಿ ಗ್ರಾಮದ ಕಾವಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದ ಸರ್ವೇ ನಂಬರ್ 123/1 ರಲ್ಲಿ ಕಳೆದ 6 ವರ್ಷಗಳಿಂದ ವಾಸವಾಗಿದ್ದಾರೆ.
ದಂಪತಿಗೆ ಯಾವುದೇ ಪಿತ್ರಾರ್ಜಿತವಾಗಿ ಆಸ್ತಿಯೂ ಇರುವುದಿಲ್ಲ. ಆದ್ದರಿಂದ ಸರ್ಕಾರಿ ಜಾಗ 123/1 ರಲ್ಲಿನ ಕಾಪಿನಬಾಗಿಲು ಎಂಬಲ್ಲಿ ವಾಸವಾಗಿದ್ದಾರೆ. ದಂಪತಿ ನಿತ್ಯ ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ

ಸರ್ಕಾರಿ ಜಾಗದಲ್ಲಿ ಇದ್ದೇವೆ ಎಂಬ ಕಾರಣದಿಂದಾಗಿ ಬೆಳ್ತಂಗಡಿ ತಾಲೂಕಿನ ಅಶೋಕ್ ಆಚಾರ್ಯ ಎಂಬವರು ದಂಪತಿಯನ್ನು ಒಕ್ಕಲೆಬ್ಬಿಸುವ ಸಲುವಾಗಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಬಳಿಕ, ಸರ್ಕಾರಿ ಜಾಗ ಖಾಲಿ ಮಾಡುವಂತೆ ಸೂಚನೆ ನೀಡಲಾಯಿತು. ಕಳೆದ ಫೆಬ್ರವರಿಯಲ್ಲೇ ಮನೆ ತೆರವಿಗೆ ಅಧಿಕಾರಿಗಳು ಮುಂದಾಗಿದ್ದರು. ಆದರೆ, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪ್ರಕರಣ ತಣ್ಣಗಾಗಿತ್ತು

ಆದರೆ, ಇದೀಗ ಅಧಿಕಾರಿಗಳು ಮನೆಯ ವಸ್ತುಗಳನ್ನ ಹೊರಗೆಸೆದು ಏಕಾಏಕಿ ಮನೆ ದ್ವಂಸ ಮಾಡಿದ್ದಾರೆ. ವೃದ್ಧ ದಂಪತಿ ಕಣ್ಣೀರು ಹಾಕಿದರೂ ಅಧಿಕಾರಿಗಳು ಮನೆ ತೆರವುಗೊಳಿಸಿದ್ದಾರೆ. ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಆರ್ ಐ ಪೃಥ್ವಿರಾಜ್, ಉಪ್ಪಿನಂಗಡಿ ಪೊಲೀಸರ ನೇತೃತ್ವದಲ್ಲಿ ತೆರವು ಮಾಡಲಾಗಿದೆ.

ಹೀಗಾಗಿ, ವೃದ್ಧ ದಂಪತಿ “ಒಂದು ನಮಗೆ ಈ ಸರ್ಕಾರಿ ಜಾಗದಲ್ಲಿ ನಾವು ನಿರ್ಮಿಸಿರುವ ಸಣ್ಣ ಮನೆಯಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿ. ಅಥವಾ ಅದಕ್ಕೆ ಸಾಧ್ಯವಿಲ್ಲ ಎಂಬುದಾದರೆ ದಯಮಾಡಿ ವೃದ್ಧರಾದ ನಮಗೆ ದಯಾಮರಣ ಅಥವಾ ಇನ್ನಾವುದೇ ರೀತಿಯಲ್ಲಿ ಒಳ್ಳೆಯ ಮರಣಕ್ಕೆ ಅವಕಾಶವನ್ನು ನೀಡಬೇಕಾಗಿ ಪ್ರಾರ್ಥನೆ ಮಾಡುತ್ತಿದ್ದೇವೆ” ಎಂದು ರಾಷ್ಟ್ರಪತಿಯವರಿಗೆ ಪತ್ರ ಬರೆದಿದ್ದಾರೆ.