ಯಾವುದೇ ಧರ್ಮ ವಾಯುಮಾಲಿನ್ಯ ಉಂಟುಮಾಡುವ ಚಟುವಟಿಕೆ ಪ್ರೋತ್ಸಾಹಿಸಲ್ಲ ಎಂದ ಕೋರ್ಟ್
ನವದೆಹಲಿ: ಯಾವುದೇ ಧರ್ಮವು ವಾಯುಮಾಲಿನ್ಯವನ್ನು ಉಂಟುಮಾಡುವ ಚಟುವಟಿಕೆಯನ್ನು ಪ್ರೋತ್ಸಾಹಿಸುವುದಿಲ್ಲ. ದೀಪಾವಳಿ ಹೆಸರಿನಲ್ಲಿ ಈ ಪ್ರಮಾಣದಲ್ಲಿ ಪಟಾಕಿಗಳನ್ನು (Fire Crackers) ಸುಟ್ಟರೆ, ಅದು ನಾಗರಿಕರ ಆರೋಗ್ಯದ ಮೂಲಭೂತ ಹಕ್ಕಿನ ಮೇಲೂ ಪರಿಣಾಮ ಬೀರುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court) ಅಸಮಾಧಾನ ವ್ಯಕ್ತಪಡಿಸಿದೆ.

ದೆಹಲಿಯಲ್ಲಿನ ಮಾಲಿನ್ಯದ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಅಭಯ್ ಎಸ್ ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠ, ಹಬ್ಬದ ಸಮಯದಲ್ಲಿ ಪಟಾಕಿ ನಿಷೇಧವನ್ನು ಜಾರಿಗೊಳಿಸಲು ವಿಫಲವಾಗಿರುವ ದೆಹಲಿ ಸರ್ಕಾರ ಮತ್ತು ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಸೀಮಿತ ತಿಂಗಳಿಗೆ ಮಾತ್ರ ಪಟಾಕಿ ನಿಷೇಧ ಯಾಕೆ? ವರ್ಷವಿಡಿ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿತು. ಅಕ್ಟೋಬರ್ 14 ರಂದು ಜಾರಿಗೊಳಿಸಿದ ದೆಹಲಿ ಸರ್ಕಾರದ ಆದೇಶವನ್ನು ನ್ಯಾಯಾಲಯವು ಪರಿಶೀಲಿಸಿತು. ಇದು ಪಟಾಕಿಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿತು, ಆದರೆ ಚುನಾವಣೆಗಳು ಮತ್ತು ಮದುವೆಗಳಂತಹ ಕಾರ್ಯಕ್ರಮಗಳಿಗೆ ವಿನಾಯಿತಿಗಳನ್ನು ನೀಡಿದೆ. ನಿಮ್ಮ ಆದೇಶದಲ್ಲಿ ಚುನಾವಣೆ, ಮದುವೆ ಇತ್ಯಾದಿಗಳಿಗೆ ಪಟಾಕಿಗಳನ್ನು ಸುಡಬಹುದು ಎಂದು ಹೇಳಿದೆಯೇ? ನಿಮ್ಮ ಪ್ರಕಾರ ಮಾಲಿನ್ಯಕ್ಕೆ (Air Pollution) ಪಾಲುದಾರರು ಯಾರು? ಎಂದು ಕೋರ್ಟ್ ಕೇಳಿತು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಪ್ರಸ್ತುತ ಆದೇಶವು ಹಬ್ಬ ಹರಿದಿನಗಳಲ್ಲಿ ಮತ್ತು ದೆಹಲಿಯಲ್ಲಿ ವಾಯು ಮಾಲಿನ್ಯವನ್ನು ಉಲ್ಬಣಗೊಳಿಸುವ ತಿಂಗಳುಗಳಲ್ಲಿ ಮಾತ್ರ ವಾಯುಮಾಲಿನ್ಯದ ನಿಯಂತ್ರಣದ ಮೇಲೆ ಕೇಂದ್ರೀಕರಿಸಿದೆ ಎಂದು ವಿವರಿಸಿದರು. ಪೀಠವು ಇದನ್ನು ಒಪ್ಪಿಕೊಳ್ಳಲಿಲ್ಲ. ಶಾಶ್ವತ ನಿಷೇಧವನ್ನು ಪರಿಗಣಿಸಬೇಕು ಎಂದು ಸೂಚಿಸಿತು. ನಿಷೇಧ ಆದೇಶದ ಬಗ್ಗೆ ಸಂಬಂಧಪಟ್ಟ ಎಲ್ಲಾ ಮಧ್ಯಸ್ಥಗಾರರಿಗೆ ತಕ್ಷಣವೇ ತಿಳಿಸುವಂತೆ ಮತ್ತು ಪಟಾಕಿಗಳ ಮಾರಾಟ ಮತ್ತು ತಯಾರಿಕೆ ನಿಷೇಧವನ್ನು ಖಚಿತಪಡಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿತು

ನವೆಂಬರ್ 25ರ ಮೊದಲು ನಗರದಲ್ಲಿ ಪಟಾಕಿಗಳ ಮೇಲೆ ‘ಶಾಶ್ವತ ನಿಷೇಧ’ವನ್ನು ಪರಿಗಣಿಸುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಿದೆ. ಪಟಾಕಿ ನಿಷೇಧ ನಿರ್ದಿಷ್ಟ ಅವಧಿಗೆ ಸೀಮಿತವಾಗಿರದೆ ಒಂದು ವರ್ಷದ ಅವಧಿಯ ನಿಷೇಧದ ಅಗತ್ಯವಿದೆ ಎಂದು ನ್ಯಾಯಾಲಯ ಒತ್ತಿಹೇಳಿತು. ಯಾರಾದರೂ ಪಟಾಕಿ ಸಿಡಿಸುವುದು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಲು ಬಯಸಿದರೆ, ಅವರು ನ್ಯಾಯಾಲಯಕ್ಕೆ ಬರಲಿ. ದೀಪಾವಳಿ ಮಾತ್ರವಲ್ಲದೆ ವರ್ಷಪೂರ್ತಿ ಪಟಾಕಿಗಳನ್ನು ನಿಷೇಧಿಸಬೇಕು ಎಂದು ನ್ಯಾಯಾಲಯ ಟೀಕಿಸಿದೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ನಂತರ ದೆಹಲಿಯು ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ