ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ ವಿಜಯಪುರ ಜಿಲ್ಲೆ ನಾಗಾಠಾಣ ಕ್ಷೇತ್ರದ ಮಾಜಿ ಶಾಸಕ ದೇವಾನಂದ್ ಫೂಲ್ ಸಿಂಗ್ ಚವ್ಹಾಣ್ ಅವರಿಂದ 2 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪದಡಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಹೋದರರ ವಿರುದ್ದ ಎಫ್ಐಆರ್ ದಾಖಲಾಗಿದೆ.

ಪ್ರಲ್ಹಾದ್ ಜೋಶಿ ಅವರ ಅಣ್ಣ ಗೋಪಾಲ ಜೋಶಿ, ತಂಗಿ ವಿಜಯಲಕ್ಷಿ ಜೋಶಿ, ಅವರ ಪುತ್ರ ಅಜಯ್ ಜೋಶಿ ವಿರುದ್ದ ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಾನಂದ್ ಅವರ ಪತ್ನಿ ಸುನಿತಾ ಚವ್ಹಾಣ್ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ದೇವಾನಂದ್ ಫೂಲ್ ಸಿಂಗ್ ಚವ್ಹಾಣ್ ಅವರು 2018ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದರು, 2023ರಲ್ಲಿ ಸೋತಿದ್ದರು. ಆ ಬಳಿಕ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಪ್ರಯತ್ನ ಮಾಡುತ್ತಿದ್ದರು.

ಈ ವೇಳೆ ಬೆಳಗಾವಿ ಜಿಲ್ಲೆ ಅಥಣಿಯ ಇಂಜಿನಿಯರ್ ಶೇಖರ್ ನಾಯಕ್ ಎಂಬವರು ಪರಿಚಯವಾಗಿದ್ದರು. ಶೇಖರ್ ನಾಯಕ್ ಅವರು ಪ್ರಲ್ಹಾದ್ ಜೋಶಿ ಸಹೋದರ ಗೋಪಾಲ ಜೋಶಿ ತನಗೆ ಪರಿಚಯ ಇರುವುದಾಗಿ ಹೇಳಿದ್ದರು. ಜೊತೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸುವ ಬಗ್ಗೆ ತಿಳಿಸಿದ್ದರು. ಹುಬ್ಬಳಿಗೆ ಕರೆದೊಯ್ದು ಗೋಪಾಲ ಜೋಶಿಯವರನ್ನು ಭೇಟಿ ಮಾಡಿಸಿದ್ದರು ಎಂದು ದೂರಿನಲ್ಲಿ ಹೇಳಿರುವುದಾಗಿ ವರದಿಯಾಗಿದೆ.
ಕೇಂದ್ರದಲ್ಲಿ ನನ್ನ ಸಹೋದರ ಪ್ರಲ್ಹಾದ್ ಜೋಶಿ ತುಂಬಾ ಪ್ರಭಾವಿ ಇದ್ದಾರೆ. ಅವರು ಹೇಳಿದಂತೆ ಮೋದಿ, ಅಮಿತ್ ಶಾ ಕೇಳುತ್ತಾರೆ. ನನ್ನ ತಮ್ಮನ ಜೊತೆ ಮಾತನಾಡಿ ನಿಮಗೆ ವಿಜಯಪುರ ಕ್ಷೇತ್ರದ ಟಿಕೆಟ್ ಕೊಡಿಸುತ್ತೇನೆ ಎಂದು ಗೋಪಾಲ್ ಜೋಶಿ ಭರವಸೆ ನೀಡಿದ್ದರು. ಅಲ್ಲದೆ 5 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಷ್ಟು ಹಣ ಇಲ್ಲ ಎಂದಾಗ 25 ಲಕ್ಷ ರೂಪಾಯಿಯ ಚೆಕ್ ಪಡೆದಿದ್ದರು. ಆ ಹಣವನ್ನು ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ವಿಜಯಲಕ್ಷಿ ಅವರ ಮನೆಗೆ ತಲುಪಿಸಲಾಗಿತ್ತು. ನಂತರ ಅಮಿತ್ ಶಾ ಅವರ ಆಪ್ತ ಸಹಾಯಕರ ಜೊತೆ ಮಾತನಾಡಿದ್ದಾಗಿ ಹೇಳಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರಂಭದಲ್ಲಿ 25 ಲಕ್ಷ ಪಡೆದುಕೊಂಡಿದ್ದ ಗೋಪಾಲ ಜೋಶಿ ಹಾಗೂ ಮತ್ತಿತರರು ನಂತರ ದಿನಗಳಲ್ಲಿ ಚುನಾವಣೆಯ ಸಂಪೂರ್ಣ ಖರ್ಚು ನೋಡಿಕೊಳ್ಳುವುದಾಗಿ ಹೇಳಿ 1.75 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ವರದಿಗಳು ಹೇಳಿವೆ.
ಎಫ್ಐಆರ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರೂ ಸೇರಿಸಲಾಗಿದೆ ಎಂದು ಕೆಲವೊಂದು ವರದಿಗಳು ಹೇಳಿವೆ. ಆದರೆ, ಈ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ.