ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪ್ರವೇಶಿಸಿರುವ ಕುಸ್ತಿಪಟು ವಿನೇಶ್ ಫೋಗಟ್‌ಗೆ ಅಭಿನಂದನೆ ಸಲ್ಲಿಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ “ವಿನೇಶ್ ಪೋಗಟ್ ಬಗ್ಗೆ ಮಾತನಾಡುವವರಿಗೆ ಇಂದು ಉತ್ತರ ಸಿಕ್ಕಿದೆ, ಆಕೆಯ ಯಶಸ್ಸಿನ ಪ್ರತಿಧ್ವನಿ ದೆಹಲಿಗೆ ಮುಟ್ಟಿದೆ” ಎಂದಿದ್ದಾರೆ.

ಈ ಮೂಲಕ ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ವಿರುದ್ದ ಲೈಗಿಂಕ ದೌರ್ಜನ್ಯದ ಆರೋಪ ಕೇಳಿ ಬಂದಾಗ ಹೋರಾಟ ನಡೆಸಿದ ಕುಸ್ತಿಪಟುಗಳನ್ನು ಅಪರಾಧಿಗಳಂತೆ ಕಂಡ ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ ಕುಸ್ತಿ 50 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಝ್ಮನ್ ಲೋಪೆಝ್ ಅವರನ್ನು ಸೋಲಿಸಿ ವಿನೇಶ್ ಫೋಗಟ್ ಅವರು ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದಾರೆ.

ವಿನೇಶ್ ಸಾಧನೆಯ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ “ವಿಶ್ವದ ಮೂವರು ಅಗ್ರಗಣ್ಯ ಕುಸ್ತಿಪಟುಗಳನ್ನು ಒಂದೇ ದಿನದಲ್ಲಿ ಸೋಲಿಸಿದ ವಿನೇಶ್ ಜೊತೆಗೆ ಇಡೀ ದೇಶ ಭಾವುಕವಾಗಿದೆ. ವಿನೇಶ್ ಮತ್ತು ಅವರ ಸಹೋದ್ಯೋಗಿಗಳ ಹೋರಾಟಗಳನ್ನು ಹತ್ತಿಕ್ಕುವವರು, ಅವರ ಉದ್ದೇಶ ಮತ್ತು ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡುವವರಿಗೆ ಇಂದು ಉತ್ತರಗಳು ಸಿಕ್ಕಿದೆ” ಎಂದು ಹೇಳಿದ್ದಾರೆ.
ಇಂದು ಇಡೀ ಅಧಿಕಾರ ವ್ಯವಸ್ಥೆಯೇ ಭಾರತದ ವೀರ ಪುತ್ರಿಯ ಮುಂದೆ ರಕ್ತ ಕಣ್ಣೀರು ಸುರಿಸುವಂತೆ ಆಗಿದೆ. ಇದು ಚಾಂಪಿಯನ್‌ಗಳ ಗುರುತು, ಅವರು ತಮ್ಮ ಕಾರ್ಯ ಕ್ಷೇತ್ರದಿಂದ ಉತ್ತರಗಳನ್ನು ನೀಡುತ್ತಾರೆ. ವಿನೇಶ್ ಅವರಿಗೆ ಶುಭಾಶಯಗಳು. ಪ್ಯಾರಿಸ್‌ನಲ್ಲಿ ನಿಮ್ಮ ಯಶಸ್ಸಿನ ಪ್ರತಿಧ್ವನಿ ದೆಹಲಿಗೆ ಸ್ಪಷ್ಟವಾಗಿ ಕೇಳಿಸಿತು” ಎಂದಿದ್ದಾರೆ.

ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ, ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ವಿರುದ್ದ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಕೇಳಿ ಬಂದಿತ್ತು. ಆಗ ಬ್ರಿಜ್ ಭೂಷಣ್ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಭಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ನೇತೃತ್ವದಲ್ಲಿ ಹೋರಾಟ ನಡೆದಿತ್ತು.

ಕೇಂದ್ರ ಸರ್ಕಾರ ಕುಸ್ತಿಪಟುಗಳ ಅಳಲು ಕೇಳುವ ಬದಲಾಗಿ, ಅವರನ್ನು ಟೀಕಿಸುವ ಕೆಲಸ ಮಾಡಿತ್ತು. ಬಿಜೆಪಿ ಮತ್ತು ಸಂಘಪರಿವಾರದ ಐಟಿ ಸೆಲ್‌ಗಳು ವಿನೇಶ್ ಫೋಗಟ್ ಸೇರಿದಂತೆ ಹೋರಾಟ ನಿರತ ಕುಸ್ತಿಪಟುಗಳನ್ನು ದೇಶದ್ರೋಹಿಗಳಂತೆ ಬಿಂಬಿಸಿತ್ತು. ಅವರ ಹೋರಾಟ ರಾಜಕೀಯ ಪ್ರೇರಿತ ಎಂದಿತ್ತು. ಬ್ರಿಜ್ ಭೂಷಣ್ ವಿರುದ್ದ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇವೆಲ್ಲದಕ್ಕೂ ತನ್ನ ಒಲಿಂಪಿಕ್ಸ್ ಸಾಧನೆಯ ಮೂಲಕ ವಿನೇಶ್ ಉತ್ತರ ನೀಡಿದ್ದಾರೆ ಎಂದು ಇಡೀ ದೇಶ ಕೊಂಡಾಡುತ್ತಿದೆ.
