ಮಂಗಳೂರು, ಆಗಸ್ಟ್.5: ಪಾಂಡೇಶ್ವರದ ಫೋರಮ್ ಮಾಲ್ ನಲ್ಲಿರುವ ಶೆರ್ಲಾಕ್ ಪಬ್ ನಲ್ಲಿ ಯುವತಿಯ ಮೈಗೆ ಕೈಹಾಕಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ದೂರು ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಿವಾಸಿಗಳಾದ ಮಹೇಶ್ (28), ವಿನಯ್ (30), ನಿತೇಶ್ (32) ಮತ್ತು ಪ್ರಿತೇಶ್ (33) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಇವರು ಶನಿವಾರ ರಾತ್ರಿ ಶೆರ್ಲಾಕ್ ಪಬ್ ಗೆ ಆಗಮಿಸಿದ್ದರು. ರಾತ್ರಿ ಹಿಂದೆ ತೆರಳುತ್ತಿದ್ದಾಗ 22 ವರ್ಷದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಎದೆಯ ಭಾಗಕ್ಕೆ ಕೈಹಾಕಿದ್ದರು ಎನ್ನಲಾಗಿದೆ. ಈ ವೇಳೆ, ತನಗೆ ಮತ್ತು ತನ್ನ ಗೆಳತಿಗೆ ಬೀಯರ್ ಬಾಟಲಿಯಲ್ಲಿ ಹಲ್ಲೆ ಮಾಡುವುದಕ್ಕೂ ಯುವಕರು ಮುಂದಾಗಿದ್ದಾರೆ ಎಂದು 22 ವರ್ಷದ ಯುವತಿ ದೂರು ನೀಡಿದ್ದರು. ಆಗಸ್ಟ್ 3ರ ಶನಿವಾರ ರಾತ್ರಿ 10.30ರ ವೇಳೆಗೆ ಘಟನೆ ನಡೆದಿದ್ದಾಗಿ ದೂರಿನಲ್ಲಿ ತಿಳಿಸಿದ್ದರು. ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಸಿಸಿಟಿವಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಸೆಕ್ಷನ್ 74, 79. 352 ಪ್ರಕಾರ ಕೇಸು ದಾಖಲಾಗಿದೆ.


