ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸ ಗೌತಮ್ ಗಂಭೀರ್‌ಗೆ ಬಹಳ ಮುಖ್ಯವಾಗಿತ್ತು. ಯಾಕೆಂದರೆ ಮುಖ್ಯ ಕೋಚ್ ಆಗಿ ಚಾರ್ಜ್ ತೆಗೆದುಕೊಂಡ ಮೇಲೆ ಮೊದಲ ಪ್ರವಾಸ ಆಗಿದೆ. ಟಿ-20 ಸರಣಿಯಲ್ಲಿ 2-1 ಅಂತರದಿಂದ ಗೆಲುವು ಸಾಧಿಸಿದ್ದರೂ, ಏಕದಿನ ಸರಣಿಯಲ್ಲಿ ಭಾರೀ ಮುಖಭಂಗ ಅನುಭವಿಸಿದೆ.

ನಿನ್ನೆ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ 32 ರನ್‌ಗಳಿಂದ ಭಾರತ ತಂಡವನ್ನು ಸೋಲಿಸಿದೆ. ಬ್ಯಾಟ್ಸ್ಮನ್ಗಳ ಕೆಟ್ಟ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ಸೋಲನ್ನು ಕಂಡಿದೆ. ಆದರೆ ಟೀಕೆ ಮಾತ್ರ ಗೌತಮ್ ಗಂಭೀರ್ ಮೇಲೆ ಕೇಳಿಬಂದಿದೆ. ತಂಡ ಸೋಲುತ್ತಿದ್ದಂತೆಯೇ ಗೌತಮ್ ಗಂಭೀರ್ ಟ್ರೋಲ್ ಆಗುತ್ತಿದ್ದಾರೆ.

ಅಂದ್ಹಾಗೆ ಗಂಭೀರ್ ಕೋಚ್ ಆದ್ಮೇಲೆ ತಂಡದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಮೂರು ಮಾದರಿಯಲ್ಲಿ ಆಡುವ ಕೆಲವು ಆಟಗಾರರು ಮಾತ್ರ ಇದ್ದಾರೆ. ಏಕದಿನ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ನಿರಂತರ ಬದಲಾವಣೆಗಳು ಆಗುತ್ತಿವೆ. ಟಿ20 ಮಾದರಿಗೆ ಹೊಸ ತಂಡವನ್ನು ಸಿದ್ಧಪಡಿಸಲಾಗಿದೆ. ಈ ರೀತಿಯ ಬದಲಾವಣೆಯಿಂದಲೇ ತಂಡ ಸೋತಿದೆ. ರಾಹುಲ್ ದ್ರಾವಿಡ್ ಕಟ್ಟಿದ ತಂಡದಲ್ಲಿ ಗಂಭೀರ್ ಅನಗತ್ಯ ಪ್ರಯೋಗ ಮಾಡ್ತಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ.

ಬ್ಯಾಟ್ಸ್‌ಮನ್‌ಗಳು ತಮ್ಮ ಸ್ಲಾಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವಾಗ ಪ್ರಯೋಗ ಯಾಕೆ ಮಾಡಬೇಕು ಎಂದು ಇನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್.ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಸ್ಥಾನವನ್ನು ಬದಲಾಯಿಸಬೇಕು ಎಂಬ ಸಲಹೆಗಳು ಕೂಡ ಕೇಳಿಬಂದಿದೆ.

ಇನ್ನು ಕೆಲವರು ತಕ್ಷಣವೇ ಕೋಚ್ ಸ್ಥಾನದಿಂದ ವಜಾಗೊಳಿಸಬೇಕು ಎಂಬ ಆಗ್ರಹವನ್ನು ಬಿಸಿಸಿಐಗೆ ಮಾಡಿದ್ದಾರೆ. ಗಂಭೀರ್‌ಗೆ 50 ಓವರ್‌ಗಳ ಮಾದರಿಯಲ್ಲಿ ತರಬೇತಿ ನೀಡಿದ ಅನುಭವ ಇಲ್ಲ. ಐಪಿಎಲ್ ತಂತ್ರವನ್ನು ಏಕದಿನ ಪಂದ್ಯದಲ್ಲೂ ಮಾಡಿ ತಪ್ಪು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇನ್ನು ಸೋಲಿನ ನಂತರ ಗೌತಮ್ ಗಂಭೀರ್ ಮುಖವು ಸೊರಗಿತ್ತು.