ಕೇರಳದ ವಯನಾಡಿನಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಬಾರಿ ಗುಡ್ಡ ಕುಸಿದಿದ್ದು ಐವರು ಸಾವನ್ನಪ್ಪಿದ್ದು ಮಣ್ಣಿನ ಅವಶೇಷಗಳಡಿ 100ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ರಕ್ಷಣಾ ಕಾರ್ಯ ತೀವ್ರಗೊಂಡಿದೆ.

ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿ ಇಂದು ಬೆಳಗ್ಗೆ ಗುಡ್ಡ ಕುಸಿದಿದ್ದು ಐವರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 100ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮೊದಲ ಭೂಕುಸಿತವು ಸುಮಾರು 2 ಗಂಟೆಗೆ ಪ್ರದೇಶಕ್ಕೆ ಅಪ್ಪಳಿಸಿತು. ನಂತರ, ವಿವರಗಳ ಪ್ರಕಾರ, ಜಿಲ್ಲೆಯು ಮುಂಜಾನೆ 4.10 ರ ಸುಮಾರಿಗೆ ಮತ್ತೊಂದು ಭೂಕುಸಿತ ಸಂಭವಿಸಿದೆ. ವಯನಾಡ್ ಜಿಲ್ಲೆಯ ಅಧಿಕಾರಿಗಳ ಪ್ರಕಾರ ತೊಂಡರ್ನಾಡ್ ಗ್ರಾಮದಲ್ಲಿ ವಾಸಿಸುವ ನೇಪಾಳಿ ಕುಟುಂಬದ ಒಂದು ವರ್ಷದ ಮಗು ಭೂಕುಸಿತವೊಂದರಲ್ಲಿ ಸಾವನ್ನಪ್ಪಿದೆ.

ಭಾರೀ ಭೂಕುಸಿತದ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಿ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ಪೀಡಿತ ಪ್ರದೇಶಕ್ಕೆ ನಿಯೋಜಿಸಲಾಗಿದೆ.
ಎನ್‌ಡಿಆರ್‌ಎಫ್‌ನ ಹೆಚ್ಚುವರಿ ತಂಡ ವಯನಾಡ್‌ಗೆ ತೆರಳುತ್ತಿದೆ. ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ವಯನಾಡ್‌ಗೆ ತೆರಳಲು ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳಿಗೆ ಸೂಚನೆ ನೀಡಲಾಗಿದೆ.

ಆದರೆ ನಿರಂತರ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಏತನ್ಮಧ್ಯೆ, ಮುಂದಿನ 3 ಗಂಟೆಗಳಲ್ಲಿ ಕೇರಳ, ಮಹಾರಾಷ್ಟ್ರ, ಮತ್ತು ಲಕ್ಷದ್ವೀಪಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

Update:ಕೇರಳದಲ್ಲಿ ಭೀಕರ ಭೂಕುಸಿತ, 12 ಮಂದಿ ಬಲಿ! 100ಕ್ಕೂ ಹೆಚ್ಚು ಮಂದಿ ಕಣ್ಮರೆ!
ಕೇರಳದ ವಯನಾಡ್ ನಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಕೇರಳದ ವಯನಾಡ್ ನಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ. 100 ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿರುವ ಬಗ್ಗೆ ವರದಿ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.