ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಮಳೆಗಾಲದಲ್ಲೂ ಗುಡ್ಡ ಕುಸಿತದ ಭೀತಿ ಸೃಷ್ಟಿಯಾಗುತ್ತದೆ. ಸುರಿಯುವ ಮಳೆ ಒಂದು ಕಾರಣವಾದರೆ ಮಾನವ ನಿರ್ಮಿತ ದುಸ್ಸಾಹಸ ಮತ್ತೊಂದು ಕಾರಣವಾಗುತ್ತದೆ.

ಮಂಗಳೂರು: ಉಡುಪಿ ಜಿಲ್ಲೆಯ ಹಾಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಸತತ ಮಳೆಯಿಂದಾಗಿ ಮಂಗಳೂರು-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ವಾಮಂಜೂರ್ ಕೆತ್ತಿಕಲ್ಎಂಬಲ್ಲಿ ಗುಡ್ಡಕುಸಿತದ ಆತಂಕ ಸೃಷ್ಟಿಯಾಗಿದೆ. ಅಸಲಿಗೆ ಮಂಗಳೂರು-ಮೂಡಬಿದರೆ ನಡುವೆ 4 ಲೇನ್ ಗಳ ರಸ್ತೆ ಕಾಮಗಾರಿ ಜಾರಿಯಲ್ಲಿದೆ ಮತ್ತು ಕೆಲಸಕ್ಕಾಗಿ ಅಲ್ಲಲ್ಲಿ ಗುಡ್ಡವನ್ನು ಅಗೆಯಲಾಗಿದೆ. ಗುಡ್ಡವನ್ನು ಅಗೆದಾಗ ಅದು ಶಿಥಿಲಗೊಳ್ಳೋದು ಸಹಜ. ಒಂದು ಪಕ್ಷ ಈ ಭಾಗದಲ್ಲಿ ಗುಡ್ಡವೇನಾದರೂ ಕುಸಿದರೆ ಮಂಗಳೂರು-ಮೂಡಬಿದರೆ ನಡುವೆ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. ಗುಡ್ಡದ ಮೇಲಿಂದ ಕೆಳಭಾಗಕ್ಕೆ ಸಣ್ಣ ಜಲಪಾತದಂತೆ ಹರಿಯುತ್ತಿರುವ ನೀರು ಸಹ ಗುಡ್ಡ ಶಿಥಿಲಗೊಳ್ಳಲು ಕಾರಣವಾಗಲಿದೆ ಗುಡ್ಡ ಕುಸಿತವುಂಟಾಗಿ ಅದರ ಮೇಲಿಂದ ಹಾದುಹೋಗಿರುವ ಹೈಟೆನ್ಷನ್ ವೈರ್ ಗಳು ರಸ್ತೆಗೆ ಬಿದ್ದರೆ ಮತ್ತಷ್ಟು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಲಿದೆ. ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಮುನ್ನೆಚ್ಚರಿಕೆಯ ಕ್ರಮವಾಗಿ 168 ಅಪಾಯಕಾರಿ ಸ್ಥಳಗಳನ್ನು ಗುರುತು ಮಾಡಿದ್ದಾರೆ

