ಕ್ಷಣಾರ್ಧದಲ್ಲಿ ಯಾವುದೇ ಭಾಷೆಯ ಪದಗಳನ್ನು ಭಾಷಾಂತರಿಸಬಲ್ಲ ಗೂಗಲ್ ಟ್ರಾನ್ಸ್ಲೇಟರ್ಗೆ ಇದೀಗ ತುಳು ಭಾಷೆ ಕೂಡ ಸೇಪರ್ಡೆಯಾಗಿದ್ದು, ಈಗ ಗೂಗಲ್ ಅನುವಾದದಲ್ಲಿ ಕನ್ನಡ, ಇಂಗ್ಲೀಷ್ ಸೇರಿದಂತೆ ಯಾವುದೇ ಭಾಷೆಯ ಪದಗಳನ್ನು ತುಳುವಿಗೆ ಭಾಷಾಂತರಿಸಿಕೊಳ್ಳಬಹುದಾದ ಆಯ್ಕೆ ದೊರಕಿದೆ. ಈ ಒಂದು ಖುಷಿಯ ವಿಚಾರ ತುಳುವರಿಗೆ ಸಂತಸ ತಂದಿದೆ

ಟೆಕ್ ದೈತ್ಯ ಗೂಗಲ್ ತನ್ನ ಬಳಕೆದಾರರಿಗೆ ಮ್ಯಾಪ್, ಜಿಮೇಲ್, ಕ್ರೋಮ್, ಗೂಗಲ್ ಡ್ರೈವ್ನಂತಹ ಹಲವಾರು ಉಪಯುಕ್ತ ಅಪ್ಲಿಕೇಶನ್ಗಳನ್ನು ನೀಡುತ್ತಾ ಬಂದಿದೆ. ಅವುಗಳಲ್ಲಿ ಗೂಗಗ್ ಟ್ರಾನ್ಸ್ಲೇಟರ್ ಪ್ರಪಂಚದಾದ್ಯಂತ ಬಹಳಷ್ಟು ಜನಪ್ರಿಯವಾಗಿದೆ. ಇದಕ್ಕೆ ಕಾರಣವೆಂದರೆ ಇದು ಹೊಂದಿರುವ ಅತ್ಯುತ್ತಮ ಭಾಷಾ ಅನುವಾದ ವೈಶಿಷ್ಟ್ಯಗಳು. ಗೂಗಲ್ ಟ್ರಾನ್ಸ್ಲೇಟರ್ನಲ್ಲಿ ಇಲ್ಲಿಯವರೆಗೆ ಕನ್ನಡ, ಹಿಂದಿ, ತೆಲುಗು ಸೇರಿದಂತೆ ಭಾರತದ ಪ್ರಮುಖ ಭಾಷೆಗಳ ಭಾಷಾಂತರ ಸೌಲಭ್ಯ ಮಾತ್ರ ಲಭ್ಯವಿತ್ತು. ಇದೀಗ ಗೂಗಲ್ ಅನುವಾದ ಪಟ್ಟಿಗೆ ತುಳು ಭಾಷೆಯೂ ಕೂಡಾ ಸೇರ್ಪಡೆಯಾಗಿದ್ದು, ಈ ಮೂಲಕ ಟೆಕ್ ದೈತ್ಯ ಗೂಗಲ್ನಲ್ಲಿ ತುಳುವಿಗೂ ಗೌರವ ಸಿಕ್ಕಂತಾಗಿದೆ. ಈ ವಿಚಾರ ತುಳುವರಿಗೆ ಸಂತಸವನ್ನು ತಂದಿದೆ.

ಗೂಗಲ್ ಅನುವಾದ ಪಟ್ಟಿಯಲ್ಲಿ ತುಳು ಭಾಷೆಗೂ ಮಾನ್ಯತೆ ಸಿಕ್ಕಿದ್ದು, ಇದು ತುಳು ಭಾಷಾ ಪ್ರೇಮಿಗಳಲ್ಲಿ ಸಂತಸವನ್ನು ತಂದಿದೆ. ಇನ್ನು ಮುಂದೆ ತುಳು ಭಾಷಿಗರು ಇಂಗ್ಲೀಷ್ ಅಥವಾ ಇನ್ನಾವುದೇ ಪದಗಳನ್ನು ಗೂಗಲ್ ಟ್ರಾನ್ಸ್ಲೇಟರ್ನಲ್ಲಿ ನೇರವಾಗಿ ತುಳುವಿನಲ್ಲಿಯೇ ಅರ್ಥೈಸಿಕೊಳ್ಳಬಹುದು. ಅಲ್ಲದೆ ಇದು ಅನ್ಯ ಭಾಷಿಗರಿಗೆ ತುಳು ಪದಗಳನ್ನು ಅರ್ಥೈಸಿಕೊಳ್ಳುವುದಕ್ಕೂ ಅನುಕೂಲಕರವಾಗಿದೆ.

ಈ ಕುರಿತ ಪೋಸ್ಟ್ ಒಂದನ್ನು @trollbogra ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಗೂಗಲ್ ಟ್ರಾನ್ಸ್ಲೇಟರ್ಗೂ ಬಂದ ತುಳು ಭಾಷೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗಿರುವ ಈ ಪೋಸ್ಟ್ ಅಲ್ಲಿ ಗೂಗಲ್ ಟ್ರಾನ್ಸ್ಲೇಟರ್ನಲ್ಲಿ ಹೌ ಆರ್ ಯು (ಹೇಗಿದ್ದೀರಾ) ಎಂಬ ಪದವನ್ನು ಯೀರ್ ಎಂಚ ಉಲ್ಲರ್ ಎಂದು ತುಳು ಭಾಷೆಗೆ ಟ್ರಾನ್ಸ್ಲೇಟ್ ಮಾಡಿರುವ ದೃಶ್ಯವನ್ನು ಕಾಣಬಹುದು.
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ಪೋಸ್ಟ್ 3 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ
