LKG UKG In Govt Schools: 2023-24 ಹಾಗೂ 2024-25ನೇ ಸಾಲಿನಲ್ಲಿ ಕ್ರಮವಾಗಿ ರಾಜ್ಯದ 262 ಮತ್ತು 316 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ.
ಬೆಂಗಳೂರು: ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ ಅನುಮೋದನೆಗೊಂಡಂತೆ ರಾಜ್ಯದ ಆಯ್ದ 578 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು (govt pre-schools) ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. 2023-24 ಹಾಗೂ 2024-25ನೇ ಸಾಲಿನಲ್ಲಿ ಕ್ರಮವಾಗಿ ರಾಜ್ಯದ 262 ಮತ್ತು 316 ಸರ್ಕಾರಿ ಪ್ರಾಥಮಿಕ ಶಾಲೆ ಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು (LKG UKG In Govt Schools) ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ

ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ 2023-24 ಹಾಗೂ 2024-25ನೇ ಸಾಲಿನಲ್ಲಿ ಕ್ರಮವಾಗಿ ರಾಜ್ಯದ 262 ಮತ್ತು 316 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ಅದರಂತೆ, 2023-24 ನೇ ಸಾಲಿನಲ್ಲಿ ರಾಜ್ಯದ ಆಯ್ದ 262 ಮತ್ತು 2024-25ನೇ ಸಾಲಿನಲ್ಲಿ 316 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರದ ಅನುಮತಿ ನೀಡುವಂತೆ ಕೋರಿ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ಆದೇಶ ಹೊರಡಿಸಲಾಗಿದೆ.

ಇನ್ನು ಶಿಕ್ಷಣ ಸಚಿವಾಲದ ಸೂಚನೆಯಂತೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸುವ ಸಂಬಂಧದಲ್ಲಿ ಈ ಕೆಳಗಿನಂತೆ ವಿವರವಾದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ
ತರಗತಿ ಪ್ರಾರಂಭಿಸಲು ಪಾಲಿಸಬೇಕಾದ ಸೂಚನೆಗಳು
- 2024-25ನೇ ಸಾಲಿನ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಎಲ್ಲಾ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
- 2024-25ನೇ ಸಾಲಿನಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಕುರಿತು ಸರ್ಕಾರಿ ಪ್ರಾಥಮಿಕ ಶಾಲೆಗಳ ಎಸ್.ಡಿ.ಎಂ.ಸಿಯವರು ಮತ್ತು ಶಿಕ್ಷಕರು ಸ್ಥಳೀಯ ಮಟ್ಟದಲ್ಲಿ ಪ್ರಚಾರ ಮಾಡಬೇಕು.
- 2024-25ನೇ ಸಾಲಿನ ಪೂರ್ವ ಪ್ರಾಥಮಿಕ LKGಯ ಒಂದು ವಿಭಾಗವನ್ನು ಮಾತ್ರ ಪ್ರಾರಂಭಿಸುವುದು, ಈ LKG ತರಗತಿಗೆ 4 ವರ್ಷದಿಂದ 5 ವರ್ಷದ ವಯೋಮಿತಿಯ ಒಳಗಿನ ಮಕ್ಕಳನ್ನು ದಾಖಲುಮಾಡಿಕೊಳ್ಳುವುದು. ಈ ವಿಭಾಗ ಪ್ರಾರಂಭಿಸಲು 4 ವರ್ಷದಿಂದ 5 ವರ್ಷದ ವಯೋಮಾನದ ಕನಿಷ್ಠ 20 ಮಕ್ಕಳು ಪ್ರವೇಶ ಪಡೆಯುವಂತಿರಬೇಕು ಹಾಗೂ ಗರಿಷ್ಠ 30 ಮಕ್ಕಳನ್ನು ಮಾತ್ರ ದಾಖಲಿಸಬೇಕು.
- ಪೂರ್ವ ಪ್ರಾಥಮಿಕ ತರಗತಿಯನ್ನು ಪ್ರಾರಂಭಿಸಲು ಒಂದು ಕೊಠಡಿಯನ್ನು ಗುರುತಿಸಿಕೊಳ್ಳುವುದು ಹಾಗೂ ಕೊಠಡಿ ಸಜ್ಜುಗೊಳಿಸುವುದು ಅವಶ್ಯ ಸಾಧನ ಸಾಮಗ್ರಿಗಳನ್ನು ನಿಯಮಾನುಸಾರ ಖರೀದಿಸುವುದು. ಕೊಠಡಿ ಸಜ್ಜುಗೊಳಿಸಲು ಸ್ಥಳಿಯ ಚಿತ್ರಕಲಾ ಶಿಕ್ಷಕರನ್ನು / ಚಿತ್ರಕಲಾ ಪರಿಣಿತರನ್ನು ಬಳಸಿಕೊಂಡು ಮಕ್ಕಳಿಗೆ ಆಕರ್ಷಕವಾದ ಚಿತ್ರಗಳ ರಚನೆ, ಗೋಡೆ ಮೇಲೆ ನೆಲ ಮಟ್ಟದಿಂದ 2 ಅಡಿಯವರೆಗೆ ಮಕ್ಕಳು ಬರೆಯಲು/ ಚಿತ್ರ ರಚಿಸಲು ಸಾಧ್ಯವಾಗುವಂತೆ ಗ್ರೀನ್ ಬೋರ್ಡ/ಕರಿಹಲಗೆ ರಚನೆ ಮುಂತಾದ ಕಾರ್ಯಗಳನ್ನು ಮಾಡುವುದು. ಖರೀದಿಸಬೇಕಾದ ಸಾಧನ ಸಾಮಗ್ರಿಗಳ ಪಟ್ಟಿಯನ್ನು ಹಾಗೂ ಕೆಲವು ಕೊಠಡಿಯ ವಿನ್ಯಾಸದ ಕೆಲವು ಮಾದರಿ ಉದಾಹರಣೆಗಳನ್ನು ಕೂಡಲೇ ಒದಗಿಸಬೇಕು.
- ಪ್ರತಿ ಪೂರ್ವ ಪ್ರಾಥಮಿಕ ತರಗತಿಗೆ ಒಬ್ಬ ಶಿಕ್ಷಕಿ/ಶಿಕ್ಷಕ ಮತ್ತು ಒಬ್ಬರು ಆಯಾರವರನ್ನು ಶಾಲಾ ಎಸ್.ಡಿ.ಎಂ.ಸಿ ವತಿಯಿಂದ ತಾತ್ಕಾಲಿಕವಾಗಿ 10 ತಿಂಗಳುಗಳ ಅವಧಿಗೆ ನೇಮಕ ಮಾಡಿಕೊಳ್ಳತಕ್ಕದ್ದು. ಪೂರ್ವ ಪ್ರಾಥಮಿಕ ತರಗತಿ ಶಿಕ್ಷಕಿ/ಶಿಕ್ಷಕರಿಗೆ ಪ್ರಸ್ತುತ ಅತಿಥಿ ಶಿಕ್ಷಕರಿಗೆ ನೀಡುತ್ತಿರುವ ಸಂಭಾವನೆಯಂತೆಯೇ ಮಾಸಿಕ 10,000 ರೂ. ಮತ್ತು ಆಯಾಗಳಿಗೆ ಮಾಸಿಕ 5000 ರೂ. ಸಂಭಾವನೆಯನ್ನು ನಿಗದಿಪಡಿಸತಕ್ಕದ್ದು.
- ವೇತನ ಅನುದಾನವನ್ನು ಆಯಾ ಎಸ್.ಡಿ.ಎಂ.ಸಿ. ಖಾತೆಗೆ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಿಂದ ಬಿಡುಗಡೆ ಮಾಡಬೇಕು

ಆಯಾಗಳ ಹುದ್ದೆಗೆ ಅರ್ಹತೆ:
- ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು ಕಡ್ಡಾಯವಾಗಿ ಮಹಿಳೆಯಾಗಿರಬೇಕು, ವಯಸ್ಸು 45 ವರ್ಷಕ್ಕಿಂತ ಕಡಿಮೆ ಇರಬೇಕು ಮತ್ತು ಸ್ಥಳಿಯರಾಗಿರಬೇಕು (ಆಯಾ ಗ್ರಾಮ/ವಾರ್ಡ್ ವ್ಯಾಪ್ತಿಯವರು), ಒಂದು ವೇಳೆ ಸ್ಥಳಿಯವಾಗಿ ಯಾವುದೇ ಅಭ್ಯರ್ಥಿ ಲಭ್ಯವಿಲ್ಲದೇ ಇದ್ದಲ್ಲಿ ಸರ್ಕಾರಿ ಶಾಲೆ ಇರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದವರನ್ನು/ಪಕ್ಕದ ವಾರ್ಡಿನವರನ್ನು ಪರಿಗಣಿಸತಕ್ಕದ್ದು.
ಶಿಕ್ಷಕರ/ಆಯಾರ ಆಯ್ಕೆಯಲ್ಲಿ ಅನುಸರಿಸಬೇಕಾದ ಮಾನದಂಡಗಳು
- a) ಶಿಕ್ಷಕರ/ಆಯಾರ ಆಯ್ಕೆ ಸಮಿತಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಇರುವ ಮುಖ್ಯ ಶಿಕ್ಷಕರು, ಪ್ರಾಥಮಿಕ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಒಬ್ಬ ಹಿರಿಯ ಸಹ ಶಿಕ್ಷಕ / ಶಿಕ್ಷಕಿ ಸದಸ್ಯರಾಗಿರತಕ್ಕದ್ದು.
B)ಶಿಕ್ಷಕರ ಆಯ್ಕೆಗೆ ವಿವಿಧ ಅಂಶಗಳಿಗೆ ನೀಡಬೇಕಾದ ಮೌಲ್ಯ (weightage): ಅರ್ಹ ಅಭ್ಯರ್ಥಿಗಳ ಪೈಕಿ ನಿಗದಿತ ಮಾನದಂಡದಂತೆ ಅತೀ ಹೆಚ್ಚು ಒಟ್ಟು ಅಂಕಗಳಿಸಿದವರನ್ನು ಪರಿಗಣಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
