
ನರೇಂದ್ರ ಮೋದಿ ಅವರು ಜೂನ್ 9ರ ಭಾನುವಾರ ಸಂಜೆ 7.15ಕ್ಕೆ ಸತತ 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನವದೆಹಲಿ (ಜೂ.08): ನರೇಂದ್ರ ಮೋದಿ ಅವರು ಜೂನ್ 9ರ ಭಾನುವಾರ ಸಂಜೆ 7.15ಕ್ಕೆ ಸತತ 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ, ಕೆಲವು ಸಚಿವರೂ ಶಪಥಗ್ರಹಣ ಮಾಡಲಿದ್ದಾರೆ. ಇದರೊಂದಿಗೆ ಪಂ. ಜವಾಹರಲಾಲ್ ನೆಹರು ಅವರ ನಂತರ ಸತತ 3ನೇ ಬಾರಿಗೆ ಪ್ರಧಾನಿ ಆದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಮೋದಿ ಭಾಜನರಾಗಲಿದ್ದಾರೆ. ಜತೆಗೆ ಸತತ 3 ಬಾರಿ ಪ್ರಧಾನಿಯಾದ ಏಕೈಕ ಕಾಂಗ್ರೆಸ್ಸೇತರ ನಾಯಕ ಎಂಬ ಕೀರ್ತಿಯನ್ನೂ ಸಂಪಾದಿಸಲಿದ್ದಾರೆ. ಶುಕ್ರವಾರ ಬೆಳಗ್ಗೆ ಅವರು ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಕೂಟದ ನಾಯಕನಾಗಿ ಆಯ್ಕೆ ಆದರು.

ನಂತರ ಸಂಜೆ ಮೋದಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಇದನ್ನು ಮನ್ನಿಸಿದ ಮುರ್ಮು ಅವರು, ಮೋದಿ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿದರು. ‘ಎನ್‌ಡಿಎ ಭಾಗೀದಾರರು ಸಲ್ಲಿಸಿದ ಬೆಂಬಲ ಪತ್ರಗಳಿಂದ ರಾಷ್ಟ್ರಪತಿಗಳು ಸಂತುಷ್ಟರಾಗಿದ್ದು, ಸ್ಥಿರ ಸರ್ಕಾರದ ವಿಶ್ವಾಸ ಹೊಂದಿದ್ದಾರೆ ಹಾಗೂ ನರೇಂದ್ರ ಮೋದಿ ಅವರನ್ನು ಪ್ರಧಾನಿ ಎಂದು ನೇಮಿಸಿದ್ದಾರೆ. ಭಾನುವಾರ ಸಂಜೆ 7.15ಕ್ಕೆ ಮೋದಿ ಹಾಗೂ ಸಂಪುಟ ಸದಸ್ಯರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ’ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

