
Jammu and Kashmir Lok Sabha Election Updates: ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ಐದು ಲೋಕಸಭಾ ಕ್ಷೇತ್ರಗಳಲ್ಲಿ ಎರಡರಲ್ಲಿ ಬಿಜೆಪಿ ಗೆದ್ದಿದೆ. ಎರಡು ಸ್ಥಾನಗಳು ನ್ಯಾಷನಲ್ ಕಾನ್ಫರೆನ್ಸ್ ಪಾಲಾಗಿದೆ. ಇನ್ನೊಂದು ಸ್ಥಾನ ಪಕ್ಷೇತರ ಪಾಲಾಗಿದೆ. ಭಯೋತ್ಪದನೆ ಆರೋಪದ ಮೇಲೆ ಬಂಧಿತರಾಗಿ ಕಳೆದ ಐದು ವರ್ಷಗಳಿಂದ ಜೈಲಿನಲ್ಲಿರುವ ಶೇಖ್ ಅಬ್ದುಲ್ ರಷೀದ್ ಅವರು ಅಚ್ಚರಿಯ ಗೆಲುವು ಸಾಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಸಾಜದ್ ಗಾನಿ ಲೋನೆ ವಿರುದ್ಧ ರಷೀದ್ ಗೆದ್ದಿದ್ದಾರೆ.

ಶ್ರೀನಗರ್, ಜೂನ್ 4: ಜಮ್ಮು ಮತ್ತು ಕಾಶ್ಮೀರದಲ್ಲೂ ಈ ಬಾರಿ ಅಚ್ಚರಿಯ ಫಲಿತಾಂಶ ಬಂದಿದೆ. ಐದು ಸ್ಥಾನಗಳ ಪೈಕಿ ಬಿಜೆಪಿ ಎರಡು, ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್) ಪಕ್ಷಗಳಿಗೆ ತಲಾ ಎರಡು ಸ್ಥಾನ ಸಿಕ್ಕಿವೆ. ಪಕ್ಷೇತರ ಅಭ್ಯರ್ಥಿಯೊಬ್ಬರು ಜಯಿಸಿದ್ದಾರೆ. ಈ ಪಕ್ಷೇತರ ಅಭ್ಯರ್ಥಿಯೇ ಶೇಖ್ ಅಬ್ದುಲ್ ರಷೀದ್. ಜೈಲಿನಲ್ಲಿದ್ದುಕೊಂಡೇ ಚುನಾವಣೆ ಎದುರಿಸಿ ಗೆದ್ದವರು. ಅದೂ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಅವರನ್ನೇ ಸೋಲಿಸಿದ್ದಾರೆ. ಬಾರಾಮುಲ್ಲಾ ಕ್ಷೇತ್ರದಲ್ಲಿ ಒಮರ್ ವಿರುದ್ಧ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಿಸಿದ್ದಾರೆ. ಜಮ್ಮು ಕಾಶ್ಮೀರ್ ಪೀಪಲ್ ಕಾನ್ಫರೆನ್ಸ್ ಪಕ್ಷದಿಂದ ಸಾಜದ್ ಗಾನಿ ಲೋನೆ ಕೂಡ ಕಣದಲ್ಲಿದ್ದರು. ಅವರು ಮೂರನೇ ಸ್ಥಾನ ಪಡೆದಿದ್ದಾರೆ

ಎಂಜಿನಿಯರ್ ರಷೀದ್ ಎಂದು ಹೆಸರಾಗಿರುವ ಶೇಖ್ ಅಬ್ದುಲ್ ರಷೀದ್ ಕಳೆದ ಐದು ವರ್ಷದಿಂದಲೂ ತಿಹಾರ್ ಜೈಲಿನಲ್ಲಿದ್ದಾರೆ. ಭಯೋತ್ಪಾದನೆಗೆ ಫಂಡಿಂಗ್ ವ್ಯವಸ್ಥೆ ಮಾಡಿರುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಅವರು ಜೈಲಿನಲ್ಲಿದ್ದರೂ ಬಾರಾಮುಲ್ಲಾ ಕ್ಷೇತ್ರದಿಂದ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.

ಚುನಾವಣಾ ಪ್ರಚಾರಕ್ಕೆ ಆದ ವೆಚ್ಚ ಕೇವಲ 27,000 ರೂ?
ಶೇಖ್ ಅಬ್ದುಲ್ ರಷೀದ್ ಅವರ ಪರವಾಗಿ ಪ್ರಚಾರ ನಡೆಸಿದವರು ಅವರ 22 ವರ್ಷದ ಮಗ ಅಬ್ರಾರ್ ರಷೀದ್. ಅವರ ಪ್ರಕಾರ ಸಾವಿರಾರು ಜನರು ಕಾರ್ಯಕರ್ತರಾಗಿ ಬಂದು ತಮ್ಮ ತಂದೆಯ ಗೆಲುವಿಗೆ ಕಾರಣಕರ್ತರಾಗಿದ್ದಾರೆ. ವಾಹನಕ್ಕೆ ಪೆಟ್ರೋಲ್ ತುಂಬಿಸಲು 27,000 ರೂ ಖರ್ಚಾಗಿದ್ದು ಬಿಟ್ಟರೆ ತಮ್ಮ ಕೈಯಿಂದ ಬೇರೆ ಯಾವ ವೆಚ್ಚವೂ ಆಗಿಲ್ಲ ಎನ್ನುತ್ತಾರೆ ಅಬ್ರಾರ್.

ತಮ್ಮ ತಂದೆ ಈ ಚುನಾವಣೆಯಲ್ಲಿ ಅಭೂತಪೂರ್ವ ರೀತಿಯಲ್ಲಿ ಗೆಲುವು ಸಾಧಿಸಿರುವುದು ಅವರು ನಿರ್ದೋಷಿ ಎಂಬುದನ್ನು ತೋರಿಸುತ್ತದೆ. ಸರ್ಕಾರ ಕೂಡಲೇ ತಮ್ಮ ತಂದೆಯನ್ನು ಬಿಡುಗಡೆ ಮಾಡಬೇಕು ಎಂದು ಅಬ್ರಾರ್ ರಷೀದ್ ಒತ್ತಾಯಿಸಿದ್ದಾರೆ.
ಇದೇ ವೇಳೆ, ಜಮ್ಮು ಕಾಶ್ಮೀರದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕೂಡ ಸೋಲನುಭವಿಸಿದ್ದಾರೆ. ಅನಂತನಾಗ್ ರಾಜೋರಿ ಲೋಕಸಭಾ ಕ್ಷೇತ್ರದಲ್ಲಿ ಅವರಿಗೆ ಸೋಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಭಾಗದಲ್ಲಿರುವ ಉಧಮ್ಪುರ್ ಮತ್ತು ಜಮ್ಮು ಕ್ಷೇತ್ರಗಳಲ್ಲಿ ಬಿಜೆಪಿ ನಿರೀಕ್ಷಿತ ಗೆಲುವು ಸಾಧಿಸಿದೆ.
