
ಮೈಸೂರು: ಪ್ರಧಾನಿ ಮೋದಿ ವಾಸ್ತವ್ಯ ಹೂಡಿದ್ದ ಮೈಸೂರಿನ ಖಾಸಗಿ ಹೋಟೆಲ್ ಕೊಠಡಿಯ ಬಿಲ್ ಪಾವತಿಸದ ಹಿನ್ನೆಲೆ ಅರಣ್ಯ ಇಲಾಖೆ ವಿರುದ್ಧ ಇದೀಗ ಹೋಟೆಲ್ ವ್ಯವಸ್ಥಾಪಕರು ಕಾನೂನು ಕ್ರಮಕ್ಕೆ ಮುಂದಾಗುವ ಎಚ್ಚರಿಕೆ ನೀಡಿದ್ದಾರೆ.
ಹೋಟೆಲ್ ಬಿಲ್ ಪಾವತಿ ಮಾಡದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೇ.21ರಂದು ಕಾನೂನಾತ್ಮಕ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದು, ಜೂನ್ 1ರ ಒಳಗೆ 80 ಲಕ್ಷ ಬಿಲ್ ಕಟ್ಟವಂತೆ ಪತ್ರ ಬರೆದಿರುವ ಅವರು, 18% ಬಡ್ಡಿ ಸಮೇತ 80 ಲಕ್ಷ ಪಾವತಿಸಿ ಎಂದು ತಿಳಿಸಿದ್ದಾರೆ. ಅಲ್ಲದೇ ಜೂನ್ 1ರ ಒಳಗೆ ಬಿಲ್ ಕಟ್ಟದಿದ್ದರೆ ಕಾನೂನಾತ್ಮಕ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ 50ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದರು. ಈ ವೇಳೆ ಮೈಸೂರಿನ ಪಂಚತಾರ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಕಾರ್ಯಕ್ರಮಕ್ಕೆ ಒಟ್ಟು ವೆಚ್ಚ 6 ಕೋಟಿ ರೂ. ಆಗಿತ್ತು. ಆದರೆ ಇದುವರೆಗೆ 3 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಆಗಿದೆ.

ರಾಜ್ಯ ಅರಣ್ಯ ಇಲಾಖೆಗೆ ಕೇಂದ್ರ ಅರಣ್ಯ ಇಲಾಖೆಯಿಂದ ಬಾಕಿ ಹಣ ಬರಬೇಕಿದೆ. ಹಣ ತುರ್ತಾಗಿ ಬಿಡುಗಡೆ ಮಾಡಿ ಎಂದು ರಾಜ್ಯ ಅರಣ್ಯ ಇಲಾಖೆಯಿಂದ ಕೇಂದ್ರ ಅರಣ್ಯ ಇಲಾಖೆಗೆ ಪತ್ರ ರವಾನೆಯಾಗಿದೆ. ಆದರೆ ವರ್ಷ ಕಳೆದರೂ ಹೋಟೆಲ್ ಬಿಲ್ ಪಾವತಿಸಿಲ್ಲ.
