ಉಡುಪಿ: ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿದ್ದ ಸರಣಿ ಸರಗಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು 172.02 ಗ್ರಾಂ ಚಿನ್ನ, ಮೂರು ಬೈಕ್ ಸೇರಿ ಒಟ್ಟು 9.38 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡು ಓರ್ವ ಅಂತರ್ ಜಿಲ್ಲಾ ಸರಗಳ್ಳನನ್ನು ಬಂಧಿಸಲಾಗಿದೆ. ಮಂಗಳೂರು ಮುಳಿಹಿತ್ಲು ನಿವಾಸಿ ಚಂದ್ರಶೇಖರ (25) ಬಂಧಿತ.
ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಹಿತಿ ನೀಡಿದರು.
ಉಡುಪಿ, ದ.ಕ. ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಸರಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್, ಹೆಚ್ಚುವರಿ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು.
03/01/2021 ರಂದು ಡಿಸಿಐಬಿ ಘಟಕದ ಪಿಐ ಮಂಜಪ್ಪ ಡಿ.ಆರ್. ಹಾಗೂ ಸಿಬ್ಬಂದಿ ಕಾರ್ಯದಲ್ಲಿ ನಿರತರಾಗಿದ್ದು, ಉಡುಪಿ ಸರಗಳ್ಳತನ ಪ್ರಕರಣಗಳಲ್ಲಿ ಈಗಾಗಲೇ ಸಿಸಿ ಕ್ಯಾಮೆರಾ ಫುಟೇಜ್ ನಲ್ಲಿ ಕಂಡು ಬಂದ ಕೆಎ 20 ಇ 3860 ಜುಪಿಟರ್ ಸ್ಕೂಟರ್ ನಲ್ಲಿ ಸಂಶಯಿತ ವ್ಯಕ್ತಿ ಕಂದು ಮಿಶ್ರಿತ ಬಣ್ಣದ ಶರ್ಟ್ ಧರಿಸಿ ಅಲೆವೂರು ಕಡೆಯಿಂದ ಡಯಾನ ಜಂಕ್ಷನ್ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಬಂತು. ಹಿಕ್ಕಿಕಟ್ಟೆ ಜಂಕ್ಷನ್ ಬಳಿ ಆರೋಪಿ ಚಂದ್ರಶೇಖರ್ ನನ್ನು ಬಂಧಿಸಲಾಯಿತು.
ಆತನನ್ನು ವಿಚಾರಣೆಗೊಳಪಡಿಸಿ ಸ್ಕೂಟರ್ ಬಗ್ಗೆ ದಾಖಲಾತಿ ಕೇಳಿದಾಗ ತಾನು ಸರಗಳ್ಳತನ ಮಾಡುವ ಉದ್ದೇಶದಿಂದ ಮಂಗಳೂರಿನ ಕಂಕನಾಡಿಯ ಗೋರಿಗುಡ್ಡೆಯಲ್ಲಿ ಸೆಕೆಂಡ್ ಹ್ಯಾಂಡ್ ಬಜಾರ್ ನಿಂದ ಖರೀದಿಸಲು ಟೆಸ್ಟ್ ರೈಡ್ ಮಾಡಿ ನೋಡುವುದಾಗಿ ಸುಳ್ಳು ಹೇಳಿ ತೆಗೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾನೆ.
ಈ ಸ್ಕೂಟರ್ ನಲ್ಲಿ ಮಂಗಳೂರು, ಉಡುಪಿಯ ಸೈಂಟ್ ಸಿಸಿಲಿ ಶಾಲೆ ಬಳಿ, ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣ, ಇಂದ್ರಾಳಿ, ಇನ್ನು ಉಳಿದ ಕಡೆಗಳಲ್ಲಿ ಒಂಟಿ ಮಹಿಳೆಯರು ನಡೆದುಕೊಂಡು ಹೋಗುತ್ತಿರುವಾಗ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿರುವುದಾಗಿ ತಿಳಿಸಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದರು.