
ನವದೆಹಲಿ: ರಾಜಸ್ಥಾನದ ಬನ್ಸ್ವಾರಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಮಾಡಿದ ಭಾಷಣದ ವಿರುದ್ಧ ಕಾಂಗ್ರೆಸ್ (Congress) ಸಲ್ಲಿಸಿದ್ದ ದೂರು ಸ್ವೀಕರಿಸಲಾಗಿದ್ದು, ಅರ್ಜಿ ಪರಿಗಣನೆಯಲ್ಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ (ECI) ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿಯವರ `ಸಂಪತ್ತಿನ ಮರುಹಂಚಿಕೆ’ ಭಾಷಣಕ್ಕಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಸೋಮವಾರ ಕಾಂಗ್ರೆಸ್ ನಾಯಕರ ನಿಯೋಗ ಚುನಾವಣಾ ಆಯೋಗವನ್ನು ಭೇಟಿ ಮಾಡಿ ದೂರು ನೀಡಿತ್ತು. ದೂರಿನಲ್ಲಿ ಪ್ರಧಾನಿಯವರು ಸುಳ್ಳು ಹೇಳುತ್ತಿದ್ದಾರೆ. ಹಿಂದೂ ಮತ್ತು ಮುಸ್ಲಿಮರ ನಡುವೆ ಒಡಕು ಮೂಡಿಸುತ್ತಿದ್ದಾರೆ. ರಾಜಸ್ಥಾನ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿಯವರ ಸಂಪತ್ತಿನ ಮರುಹಂಚಿಕೆ ಹೇಳಿಕೆ ದುರುದ್ದೇಶಪೂರಿತವಾದದ್ದು. ಕಾಂಗ್ರೆಸ್‍ಗೆ ಮತ ಹಾಕದಂತೆ ಮೋದಿಯವರು ಧರ್ಮವನ್ನು ಬಳಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಭಾನುವಾರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಮೋದಿ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ, ತಾಯಂದಿರು ಮತ್ತು ಸಹೋದರಿಯರ ಚಿನ್ನದ ಮಾಹಿತಿ ಪಡೆದು ಲೆಕ್ಕ ಹಾಕಿ ನಂತರ ಆ ಆಸ್ತಿಯನ್ನು ಹಂಚುತ್ತಾರೆ. ಮನಮೋಹನ್ ಸಿಂಗ್ ಸರ್ಕಾರ ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಹೇಳಿದ್ದರು. ಹೆಚ್ಚು ಮಕ್ಕಳಿರುವವರಿಗೆ ನಿಮ್ಮ ಸಂಪತ್ತನ್ನು ಹಂಚಲಾಗುತ್ತದೆ ಎಂದು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ್ದರು.

