
ಮಂಗಳೂರು ಕಡೆಯಿಂದ ಮೂಡಬಿದ್ರೆಗೆ ತೆರಳುತ್ತಿದ್ದ ಲಾರಿಯ ಬ್ರೇಕ್ ಫೇಲ್ ಆಗಿ ದಕ್ಷಿಣ ಕನ್ನಡದ ಎಡಪದವು ರಾಮಮಂದಿರದ ಬಳಿ ಸರಣಿ ಅಪಘಾತವಾಗಿದೆ. ಮೊದಲಿಗೆ ಎದುರಿಗೆ ಸಿಕ್ಕ ಸ್ವಿಫ್ಟ್ ಕಾರೊಂದಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದವರಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದಕ್ಷಿಣ ಕನ್ನಡ, ಏ.19: ದಕ್ಷಿಣ ಕನ್ನಡದ ಎಡಪದವು ರಾಮಮಂದಿರ ಬಳಿ ಮಣ್ಣಿನ ಲಾರಿ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತವಾಗಿದೆ. ಮಂಗಳೂರು ಕಡೆಯಿಂದ ಮೂಡಬಿದ್ರೆಗೆ ತೆರಳುತ್ತಿದ್ದ ಲಾರಿಯ ಬ್ರೇಕ್ ಫೇಲ್ ಆಗಿ ಈ ದುರಂತ ಸಂಭವಿಸಿದ್ದು, ಲಾರಿ ನಿಲ್ಲಿಸಲು ಆಗದೆ ಚಾಲಕ, ಸುಮಾರು 500 ಮೀಟರ್ ದೂರದ ವರೆಗೂ ಲಾರಿಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದಾನೆ. ಆದ್ರೆ, ಈ ನಡುವೆ ರಸ್ತೆಯಲ್ಲಿ ಸರಣಿ ಅಪಘಾತ ನಡೆದಿದ್ದು, ಮೊದಲಿಗೆ ಎದುರಿಗೆ ಸಿಕ್ಕ ಸ್ವಿಫ್ಟ್ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ.

ಸರಣಿ ಅಪಘಾತ; ತಪ್ಪಿದ ಅನಾಹುತ
ಅಪಘಾತದಲ್ಲಿ ಸಂಪೂರ್ಣ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದವರಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಬಳಿಕ ಮುಂದೆ ಚಲಿಸಿದ ಲಾರಿ, ಎಣ್ಣೆ ಪೂರೈಕೆ ಮಾಡುತ್ತಿದ್ದ ಪಿಕ್ಅಫ್ ವಾಹನಕ್ಕೆ ಡಿಕ್ಕಿಯಾಗಿದ್ದು, ರಸ್ತೆಗೆ ಪಿಕ್ ಅಪ್ ಉರುಳಿ ಬಿದ್ದ ಕಾರಣ ಎಣ್ಣೆ ಪ್ಯಾಕೆಟ್ಗಳು ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದಿವೆ. ನಂತರ ಎದುರಿನಿಂದ ಬಂದ ಟ್ಯಾಂಕರ್ವೊಂದು, ಲಾರಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದರೆ, ಬಳಿಕ ಎಡಪದವು ಪೇಟೆಯ ಬಳಿ ಖಾಸಗಿ ಬಸ್ಗೆ ಡಿಕ್ಕಿ ಹೊಡೆದು ಲಾರಿ ನಿಂತಿದೆ.

ಮೂಡಬಿದ್ರೆಯಿಂದ ಮಂಗಳೂರಿಗೆ ಬರುತ್ತಿದ್ದ ನಿಶ್ಮತ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸರಣಿ ಅಪಘಾತದ ನಡುವೆ ಅಗರಿ ಎಂಟರ್ಪ್ರೈಸಸ್ ಎಂಬ ಅಂಗಡಿಯ ಕಟ್ಟಡಕ್ಕೂ ಹಾನಿಯಾಗಿದೆ. ಸರಣಿ ಅಪಘಾತದಿಂದ ಎಡಪದವಿನ ಜನ ದಿಗ್ಬ್ರಮೆಗೊಂಡಿದ್ದಾರೆ.
